ನಕಲಿ ಮೈಕ್ರೋ ಫೈನಾನ್ಸ ರಿಕವರಿ ಎಜೆಂಟರ ಬಂಧನ

A B Dharwadkar
ನಕಲಿ ಮೈಕ್ರೋ ಫೈನಾನ್ಸ ರಿಕವರಿ ಎಜೆಂಟರ ಬಂಧನ

ರಾಯಚೂರು: ಮೈಕ್ರೋ ಫೈನಾನ್ಸ ಹಾವಳಿ ಒಂದೆಡೆಯಾದರೆ, ಇನ್ನೊಂದು ಕಡೆ ನಕಲಿ ಸಾಲ ರಿಕವರಿ ತಂಡವೊಂದು ವಸೂಲಿ ದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ಫೈನಾನ್ಸ ಸಾಲ ರಿಕವರಿ ತಂಡದ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ ನಾಲ್ವರು ಆರೋಪಿಗಳನ್ನ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಫಯಾಜ, ಶೇಖ ಎಂಡಿ ಆಯುಬ, ಸೈಯದ ಶಹಬಾಜ ಅಹ್ಮದ, ಅರೋನ್ ರಸೀದ ಎಂದು ಗುರುತಿಸಲಾಗಿದೆ. ಈ ತಂಡ ಮೊಬೈಲ್ ಆ್ಯಪನಲ್ಲಿ ಫೈನಾನ್ಸಗಳ ಸಾಲ ಬಾಕಿ ಇರುವವರನ್ನ ಗುರುತಿಸಿ, ಟಾರ್ಗೆಟ್ ಮಾಡುತ್ತಿದ್ದರು. ರಸ್ತೆ ಮಧ್ಯದಲ್ಲೇ ಬೈಕ್, ವಾಹನಗಳನ್ನು ಅಡ್ಡಗಟ್ಟಿ ಸಾಲ ತೀರಿಸುವಂತೆ ಬೆದರಿಕೆ ಹಾಕುತ್ತಿದ್ದರು.

ಯಾದಗಿರಿ ಜಿಲ್ಲೆ ಗುಂಡ್ಲೂರಿನ ಸೈಯದ ಬಾಷಾ ಎಂಬುವವರ ಬೊಲೆರೋ ವಾಹನವನ್ನು ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಹಿಡಿದು 12 ಸಾವಿರ ರೂ. ಬೇಡಿಕೆ ಇಟ್ಟು ವಾಹನ ಜಪ್ತಿ ಮಾಡಿದ್ದರು. ಸಾಲ ಮಾಡಿದ್ದ ಫೈನಾನ್ಸ್ ಕಂಪನಿಯಲ್ಲಿ ಸೈಯದ್ ಬಾಷಾ ಕಂತು ಕಟ್ಟಿ ಬಂದಿದ್ದರೂ ವಾಹನ ಬಿಟ್ಟಿರಲಿಲ್ಲ. ಫೈನಾನ್ಸನಲ್ಲಿ ಕಟ್ಟಿದರೆ ಸಾಲಲ್ಲ, ನಮಗೂ ಹಣ ಕೊಡಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ಅನುಮಾನದ ಮೇಲೆ ಸೈಯದ್ ಬಾಷಾ ಸಹೋದರ ಅಜೀಜ ಅವರು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೆಲ ವರ್ಷಗಳಿಂದ ಈ ನಕಲಿ ದಂಧೆಯಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.