ಬೆಳಗಾವಿ, ನವೆಂಬರ್ 13: ಇಲ್ಲಿಯ ಆಜಮ್ ನಗರದ ಬಾಕ್ಸೈಟ್ ರಸ್ತೆಯಲ್ಲಿರುವ ಕುಮಾರ್ ಹಾಲ್ ಕಟ್ಟಡದಲ್ಲಿ ಅಂತರರಾಷ್ಟ್ರೀಯ ವಂಚನೆ ನಡೆಸುತ್ತಿದ್ದ ಕಾಲ್ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿ, 33 ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಆಂತರಿಕ ಭದ್ರತಾ ವಿಭಾಗದಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈಂ) ರಘು, ಪೊಲೀಸ್ ನಿರೀಕ್ಷಕ ಗಡ್ಡೇಕರ ಮತ್ತು ಅಧಿಕಾರಿ ಅವತಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಬೋರಸೆ ತಿಳಿಸಿದ್ದಾರೆ.
ದಾಳಿಯ ವೇಳೆ ಪೊಲೀಸರು ೩೭ ಲ್ಯಾಪ್ಟಾಪ್ಗಳು, ೩೭ ಮೊಬೈಲ್ ಫೋನ್ಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ಅಳಿಸಲು ಬಳಸುತ್ತಿದ್ದ ಕ್ಲೌಡ್ ಆಧಾರಿತ ಅಪ್ಲಿಕೇಶನ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಅಮೆರಿಕನ್ ಪ್ರಜೆಗಳನ್ನು ಗುರಿಯಾಗಿಸಿದ್ದ ವಂಚನೆ ಪ್ರಾಥಮಿಕ ತನಿಖೆಯಿಂದ ಈ ಗ್ಯಾಂಗ್ ಅಮೆರಿಕನ್ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿದ್ದುದನ್ನು ಬಹಿರಂಗಪಡಿಸಿದೆ. ಆರೋಪಿಗಳು ೧೧ ವಿಭಿನ್ನ ರೀತಿಯ ವಂಚನೆ ಸ್ಕ್ರಿಪ್ಟ್ಗಳನ್ನು ಬಳಸಿ ಬಲೆಗೆಳೆಯುತ್ತಿದ್ದರು. ಅವರು ಸಾಮಾನ್ಯವಾಗಿ “ನೀವು ಈ ವಸ್ತುವನ್ನು ಆರ್ಡರ್ ಮಾಡಿದ್ದೀರಿ. ಹಾಗಿಲ್ಲದಿದ್ದರೆ ಈ ಸಂಖ್ಯೆಗೆ ಕರೆಮಾಡಿ” ಎಂಬ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದರು. ಪೀಡಿತರು ಕರೆ ಮಾಡಿದಾಗ, ಆರೋಪಿಗಳು ಅಧಿಕಾರಿಗಳಂತೆ ವರ್ತಿಸಿ ನಕಲಿ ವೆಬ್ಸೈಟ್ಗಳನ್ನು ತೋರಿಸುತ್ತಿದ್ದರು. ಬಳಿಕ ಕರೆಗಳನ್ನು “ಸೀನಿಯರ್ ಏಜೆಂಟ್ಗಳು” ಎಂದು ಕರೆಯಲ್ಪಡುವವರ ಬಳಿ ವರ್ಗಾಯಿಸಿ, ಅವರು ಬ್ಯಾಂಕ್ ಅಧಿಕಾರಿಗಳಂತೆ ನಟಿಸುತ್ತಿದ್ದರು. ಪೀಡಿತರ ಖಾತೆ ವಿವರಗಳನ್ನು ಪಡೆದು, ಬ್ಯಾಲೆನ್ಸ್ ಪರಿಶೀಲನೆ ಹೆಸರಿನಲ್ಲಿ ಮೋಸ ಮಾಡುತ್ತಿದ್ದರು.
ಆಮೇಲೆ ವಂಚಕರು ವಾಲ್ಮಾರ್ಟ್ ಗಿಫ್ಟ್ ಕಾರ್ಡ್ಗಳನ್ನು ಖರೀದಿಸಿ ಅದರ ಕೋಡ್ಗಳನ್ನು ಹಂಚಿಕೊಳ್ಳುವಂತೆ ಹೇಳುತ್ತಿದ್ದರು. ಹಣ ಹಿಂದಿರುಗಿಸುವ ಹೆಸರಿನಲ್ಲಿ ಅಥವಾ ವಂಚನೆ ತಡೆಗಟ್ಟುವ ನೆಪದಲ್ಲಿ ಅಮೆರಿಕನ್ ನಾಗರಿಕರಿಂದ ಸಂವೇದನಾಶೀಲ ಮಾಹಿತಿಯನ್ನು ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಾಯಿಪಿ ಮತ್ತು ಅರ್ಭನ್ ವಿಪಿಎನ್ ಸೇರಿದಂತೆ ಹಲವು ಸೇವೆಗಳನ್ನು ಬಳಸಿ ತಮ್ಮ ಗುರುತು ಹಾಗೂ ಸ್ಥಳ ಮರೆಮಾಡುತ್ತಿದ್ದರು. ಎಲ್ಲಾ ಕರೆಗಳು ಕ್ಲೌಡ್ ಆಧಾರಿತ ವ್ಯವಸ್ಥೆಗಳ ಮೂಲಕ ಸಾಗುತ್ತಿದ್ದವು ಎಂದು ಜಿಲ್ಲಾ ಪೊಲೀಸ್ ವರಿಷ್ಠರು ವಿವರಿಸಿದರು.
ಹಲವು ರಾಜ್ಯಗಳು, ನೇಪಾಳದ ಆರೋಪಿಗಳು ಬಂಧಿತ ೩೩ ಮಂದಿ ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಛತ್ತೀಸಗಢ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಾಖಂಡ ಹಾಗೂ ನೇಪಾಳ ಮೂಲದವರಾಗಿದ್ದಾರೆ. ಇವರಲ್ಲಿ ಯಾರೂ ಕರ್ನಾಟಕದವರಿಲ್ಲ.
ಪ್ರತಿ ತಿಂಗಳು ₹೧೨,೦೦೦ರಿಂದ ₹೪೦,೦೦೦ ವೇತನ ಹಾಗೂ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈ ಕಾಲ್ ಸೆಂಟರ್ ಮಾರ್ಚ್ ೨೦೨೫ರಲ್ಲಿ ಕಾರ್ಯಾರಂಭ ಮಾಡಿತ್ತು. ಇತ್ತೀಚೆಗೆ ಸಿಬ್ಬಂದಿ ಹೆಚ್ಚಿಸುವ ಯೋಜನೆ ಇತ್ತು ಎಂದು ತನಿಖೆ ತಿಳಿಸಿದೆ.
ಪ್ರತಿ ಆಪರೇಟರ್ ದಿನಕ್ಕೆ ಸುಮಾರು ೧೦೦ ಕರೆಗಳನ್ನು ಮಾಡುತ್ತಿದ್ದ. ಒಟ್ಟು ೩೩ ಮಂದಿ ಕೆಲಸ ಮಾಡುತ್ತಿದ್ದರಿಂದ ಪ್ರತಿದಿನ ೩,೦೦೦ಕ್ಕೂ ಹೆಚ್ಚು ಜನರನ್ನು ಮೋಸಗೊಳಿಸುವ ಸಾಧ್ಯತೆ ಇತ್ತು ಎಂದು ಪೊಲೀಸ್ ವರಿಷ್ಠರು ಹೇಳಿದರು.
ಗುಜರಾತ, ಬಂಗಾಳದ ಮಾಸ್ಟರಮೈಂಡಗಳು
ಈ ಜಾಲದ ಪ್ರಮುಖ ಇಬ್ಬರು ಮಾಸ್ಟರ್ಮೈಂಡ್ಗಳು – ಒಬ್ಬ ಗುಜರಾತ್ ಮೂಲದವರು ಮತ್ತು ಮತ್ತೊಬ್ಬ ಪಶ್ಚಿಮ ಬಂಗಾಳದವರು ಎಂದು ಗುರುತಿಸಲಾಗಿದೆ. ಇವರ ಬಂಧನಕ್ಕಾಗಿ ಮುಂದಿನ ತನಿಖೆ ನಡೆಯುತ್ತಿದೆ.
ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ದೂರಸಂಪರ್ಕ ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಂಡ ಸಾಧನಗಳ ವಿಶ್ಲೇಷಣೆಯ ಮೂಲಕ ವಂಚನೆಯ ಸಂಪೂರ್ಣ ವ್ಯಾಪ್ತಿ ಪತ್ತೆಹಚ್ಚಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.

