ಬೆಳಗಾವಿ, ಜುಲೈ 28- ಇಲ್ಲಿಯ ಕಣಬರಗಿಯ ಅಟೋ ನಗರ ಕೈಗಾರಿಕಾ ಪ್ರದೇಶದ ಮಾಲೀಕರಿಗೆ ಇ-ಸ್ವತ್ತು ದಾಖಲೆ ನೀಡಲು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಉದ್ಯೋಗ ಸ್ಥಾಪನೆಗೆ ಹಣಕಾಸು ಸಂಸ್ಥೆಗಳಿಂದ ನೆರವು ಪಡೆಯಲು ಇ-ಸ್ವತ್ತು ದಾಖಲೆ ನೀಡುವುದು ಕಡ್ಡಾಯಗೊಳಿಸಲಾಗಿದೆ. ಆದರೆ, ನ್ಯಾಯಾಲಯದ ಆದೇಶವಿದ್ದರೂ ಬೆಳಗಾವಿಯ ಕೈಗಾರಿಕಾ ಪ್ರದೇಶಗಳ ಮಾಲೀಕರಿಗೆ ಇ-ಸ್ವತ್ತು ಇದು ವರೆಗೂ ನೀಡಲಾಗಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯಲ್ಲಿ ಕೈಗಾರಿಕೆಗಳಿಗೆ ನೇರವಾಗಲು ಇ-ಸ್ವತ್ತು ದಾಖಲೆ ನೀಡಲಾಗುತ್ತಿದ್ದರೂ ಬೆಳಗಾವಿ ಮಹಾನಗರಪಾಲಿಕೆಯಿಂದ ಇದು ಇನ್ನೂ ಜಾರಿಯಾಗಿಲ್ಲ.
ಇತ್ತೀಚಿಗೆ ಜಿಲ್ಲಾಧಿಕಾರಿಗಳು ಬೆಳಗಾವಿಯ ಉದ್ಯಮಿಗಳೊಂದಿಗೆ ಈ ಕುರಿತು ಕೆಲ ಸಭೆ ನಡೆಸಿ 15 ದಿನಗಳಲ್ಲಿ ಇ-ಸ್ವತ್ತು ದಾಖಲೆ ನೀಡುವ ಭರವಸೆ ನೀಡಿದ್ದರು. ಆದರೆ, ಇದು ವರೆಗೂ ಈ ಕಾರ್ಯ ಮಾತ್ರ ಪ್ರಾರಂಭವಾಗಿಲ್ಲ. ಕೈಗಾರಿಕೆಗಳನ್ನು ಮುಂದುವರೆಸಲು ಮತ್ತು ಹೊಸ ಕೈಗಾರಿಕೆ ಸ್ಥಾಪಿಸಲು ಹಣಕಾಸಿನ ನೆರವು ಅಗತ್ಯವಾಗಿದ್ದು ಇದಕ್ಕೆ ಇ-ಸ್ವತ್ತು ದಾಖಲೆ ಅಡ್ಡಿಯಾಗಿದೆ. ಬೆಳಗಾವಿ ಮಹಾನಗರಪಾಲಿಕೆಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿ ತಕ್ಷಣವೇ ಜಾರಿಗೆ ಬರುವಂತೆ ಇ-ಸ್ವತ್ತು ದಾಖಲೆ ಒದಗಿಸಿಕೊಡಲು ಸೂಚಿಸಬೇಕು ಎಂದು ಮನವಿ ಮೂಲಕ ಕೋರಲಾಗಿದೆ.
ಬೆಳಗಾವಿ ಆಟೋ ನಗರ ಕೈಗಾರಿಕಾ ಕ್ಷೇತ್ರದಲ್ಲಿ ಸುಮಾರು 1,200 ಉದ್ಯಮಗಳು ಕಾರ್ಯ ನಿರ್ವಹಿಸುತ್ತಿದ್ದು ವ್ಯವಹಾರ ನಿರ್ವಹಣೆಗೆ ಬ್ಯಾಂಕುಗಳ ಹಣಕಾಸಿನ ನೆರವು ಅಗತ್ಯವಾಗಿದೆ, ಆದರಿಂದ ಜಿಲ್ಲಾಧಿಕಾರಿಗಳು ಮಧ್ಯಸ್ತಿಕೆ ವಹಿಸಿ ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಕೋರಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುಖ್ತಾರ ಪಠಾಣ, ಸುರೇಶ ಯಾದವ, ನಾನಾಗೌಡ ಬಿರಾದರ, ವಜ್ರಕಾಂತ ಸಾಲಿಮಠ ಮುಂತಾದವರು ಇದ್ದರು.

