ಕಾಗವಾಡ : ರಾಯಬಾಗ ತಾಲೂಕಿನ ಕುಡಚಿಯಿಂದ ಹೈದರಾಬಾದಿಗೆ ಲಾರಿಯಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಲಾರಿಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಐನಾಪುರದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿ ಬಳಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಲಾರಿಯನ್ನು ಕೆಲವರು ಅಡ್ಡಗಟ್ಟಿದ್ದಾರೆ. ಚಾಲಕನನ್ನು ವಿಚಾರಿಸಿ ಪರಿಶೀಲಿಸಿದಾಗ ದನದ ಮಾಂಸ ಇರುವುದು ಕಂಡುಬಂದಿದೆ ಎನ್ನಲಾಗಿದೆ. ಇದರಿಂದ ಕಿಡಗೇಡಿಗಳು ಲಾರಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಆಗಮಿಸುವಷ್ಟರಲ್ಲಿ ಲಾರಿಯು ಬೆಂಕಿಗೆ ಆಹುತಿಯಾಗಿದೆ.
ಲಾರಿಯಲ್ಲಿ ಸುಮಾರು ಐದು ಟನ್ನಿಗೆ ಹೆಚ್ಚು ಮಾಂಸ ಇತ್ತು ಎನ್ನಲಾಗಿದೆ. ಉಗಾರ ಸಕ್ಕರೆ ಕಾರ್ಖಾನೆ ಮತ್ತು ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಎರಡು ಪ್ರಕರಣ ದಾಖಲು :
ಕಾಗವಾಡ ತಾಲೂಕು ಐನಾಪುರದಲ್ಲಿ ಸೋಮವಾರ ರಾತ್ರಿ ಗೋಮಾಂಸ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಲಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಕಾಗವಾಡದಲ್ಲಿ ಎರಡು ಪ್ರಕರಣ ದಾಖಲಾಗಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟ ಭೀಮಶಂಕರ ಗುಳೇದ ಅವರು, ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಪ್ರಾಣಿ ಹಿಂಸೆ ಕಾಯ್ದೆ ಅಡಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಾರಿಗೆ ಬೆಂಕಿ ಹಚ್ಚಿದ್ದು ದರೋಡೆ ಮತ್ತು ಅಟ್ರಾಸಿಟಿ ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ತನಿಖೆ ತೀವ್ರಗೊಳಿಸಲಾಗಿದ್ದು ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

