ಬೆಳಗಾವಿ : ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ರವಿವಾರ ನಡೆದ ಒಟ್ಟು 7 ಸ್ಥಾನಗಳ ಚುನಾವಣೆಯಲ್ಲಿ 4 ಕ್ಷೇತ್ರಗಳ ಮತ ಎಣಿಕೆ ನ್ಯಾಯಾಲಯದ ಆದೇಶ ಮೇರೆಗೆ ತಡೆಹಿಡಿಯಲಾಗಿದ್ದು, ಇನ್ನುಳಿದ ಮೂರು ಕೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ಎರಡು ಸ್ಥಾನವನ್ನು ಜಾರಕಿಹೊಳಿ ಗುಂಪಿನವರು ಗೆಲ್ಲುವ ಮೂಲಕ ಜಾರಕಿಹೊಳಿ ಸಹೋದರರು ಬ್ಯಾಂಕಿನ ಚುಕ್ಕಾಣಿ ಹಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಬಿಡಿಸಿಸಿ ಬ್ಯಾಂಕಿನ ಒಟ್ಟು 16 ಸ್ಥಾನಗಳ ಪೈಕಿ 9 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದವು. ಅದರಲ್ಲಿ ಯರಗಟ್ಟಿಯಿಂದ ಶಾಸಕ ವಿಶ್ವಾಸ ವೈದ್ಯ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಚಿಕ್ಕೋಡಿಯಿಂದ ಶಾಸಕ ಗಣೇಶ ಹುಕ್ಕೇರಿ, ಕಾಗವಾಡದಿಂದ ಶಾಸಕ ರಾಜು ಕಾಗೆ, ಖಾನಾಪುರದಿಂದ ಅರವಿಂದ ಪಾಟೀಲ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ, ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ, ಗೋಕಾಕದಿಂದ ಅಮರನಾಥ ಜಾರಕಿಹೊಳಿ, ಅದರ್ಸ್ ದಿಂದ ಚನ್ನರಾಜ್ ಹಟ್ಟಿಹೊಳಿ ಇವರ ವಿರುದ್ದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಘೋಷಣೆ ಮಾಡಲಾಗಿತ್ತು.
ಅದರಂತೆ ಇನ್ನುಳಿದ 7 ಕ್ಷೇತ್ರಗಳಿಗೆ ಇಂದು ಮತದಾನ ನಿಗದಿಯಾಗಿತ್ತು. ಅದರಂತೆ 7 ಕ್ಷೇತ್ರದಲ್ಲಿ ಮೂರು ಕ್ಷೇತ್ರದಲ್ಲಿ ಮತದಾನದ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ರಾಮದುರ್ಗ ಕ್ಷೇತ್ರದಿಂದ ಮಲ್ಲಣ್ಣ ಯಾದವಾಡ ಹಾಗೂ ಅಥಣಿ ಕ್ಷೇತ್ರದಿಂದ ಶಾಸಕ ಲಕ್ಷ್ಮಣ ಸವದಿ 122 ಮತ ಮತ್ತು ರಾಯಬಾಗ ಕ್ಷೇತ್ರದಿಂದ ಅಪ್ಪಾಸಾಹೇಬ ಕುಲಗುಡೆ 120 ಮತ ಪಡೆದು ಆಯ್ಕೆಯಾಗಿದ್ದಾರೆ.
ಇನ್ನುಳಿದ ನಾಲ್ಕು ಕ್ಷೇತ್ರಗಳಾದ ಹುಕ್ಕೇರಿ ಹಾಗೂ ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ ಕ್ಷೇತ್ರಗಳಲ್ಲಿ ಫಲಿತಾಂಶವನ್ನು ನ್ಯಾಯಾಲಯದ ಆದೇಶದ ಮೇರೆಗೆ ತಡೆಹಿಡಿಯಲಾಗಿದೆ. ನ್ಯಾಯಾಲಯದ ಆದೇಶ ಬಳಿಕ ಈ ನಾಲ್ಕು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.
ಒಟ್ಟಾರೆ ಬಿಡಿಸಿ ಬ್ಯಾಂಕಿನ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ ಅತಿ ಹೆಚ್ವಿನ ಸ್ಥಾನವನ್ನು ಗೆಲ್ಲುವ ಮೂಲಕ ಜಾರಕಿಹೊಳಿ ಸಹೋದರರು ಬಿಡಿಸಿಸಿ ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶ ಸಾಧಿಸಿದ್ದಾರೆ.

