ಬೈಕ್ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು!

A B Dharwadkar
ಬೈಕ್ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು!

ಯಲ್ಲಾಪುರ: ಬೆಳ್ಳಂಬೆಳಿಗ್ಗೆ ಎರಡು ಕರಡಿಗಳು ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಬೈಕ್ ಬೆನ್ನಟ್ಟಿ ದಾಳಿ ನಡೆಸಿರುವ ಘಟನೆ ಕಾರವಾರ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದಗುಳಿ ವ್ಯಾಪ್ತಿಯ ಉಪಳೇಶ್ವರ ಹುತ್ಕಂಡದಲ್ಲಿ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಚಂದಗುಳಿ ಗ್ರಾಮ ಪಂಚಾಯತ್ ಸದಸ್ಯ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆಗಿದ್ದ ಆರ್.ಎಸ್. ಭಟ್ಟ ಎಂದು ಗುರುತಿಸಲಾಗಿದೆ.

ಭಟ್ ಅವರು ಬೈಕ್ ನಲ್ಲಿ ಕಸವಿಲೇವಾರಿ ಘಟಕದ ಬಳಿ ಮಾಯನಜಡ್ಡಿ ಮಾರ್ಗದಲ್ಲಿ ಸಾಗುತ್ತಿರುವಾಗ ಎರಡು ಕರಡಿಗಳು ದಾಳಿ ನಡೆಸಿ ಅವರ ಕಾಲುಗಳಿಗೆ ಗಾಯಗೊಳಿಸಿವೆ. ಈ ವೇಳೆ ಹೇಗೋ ಕರಡಿ ದಾಳಿಯಿಂದ ತಪ್ಪಿಸಿಕೊಂಡು ಬೈಕ್ ನಲ್ಲಿ  ಅವರು ಮರಳಿದ್ದಾರದರೂ ಬೆಂಬಿಡದ ಕರಡಿಗಳು ಬೈಕ್ ಬೆನ್ನಟ್ಟಿ ಮತ್ತೆ ದಾಳಿ ನಡೆಸಿದ್ದು ಈ ವೇಳೆ ಭಟ್ ಅವರ ಮುಖ, ಕೆನ್ನೆ, ಭುಜ ತೊಡೆಯ ಭಾಗಗಳಿಗೆ ಗಂಭೀರವಾಗಿ ಗಾಯಗೊಳಿಸಿವೆ. ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಭಟ್ ಅಲ್ಲೇ ಇದ್ದ ಮನೆ ಸೇರಿದ್ದಾರೆ.

ಗಂಭೀರ ಗಾಯಗೊಂಡಿದ್ದ ಆರ್.ಎಸ್.ಭಟ್ಟ ಅವರನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್.ಎಸ್.ಭಟ್ಟ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ವಿಷಯ ತಿಳಿಯುತ್ತಿದ್ದಂತೆ ಶಾಸಕ ಶಿವರಾಮ ಹೆಬ್ಬಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಅರೋಗ್ಯ ವಿಚಾರಿಸಿದ್ದಾರೆ.

ಕಾಡು ನಾಶ, ಅರಣ್ಯ ಅತಿಕ್ರಮಣದಿಂದಾಗಿ ಕಾಡು ಪ್ರಾಣಿಗಳಿಗೆ ಜಾಗ ಇಲ್ಲದಂತಾಗಿದೆ. ಈ ಭಾಗದಲ್ಲಿ ಕರಡಿ, ಚಿರತೆಗಳ ಉಪಟಳ ಇತ್ತೀಚಿನ ದಿನದಲ್ಲಿ ವ್ಯಾಪಕವಾಗಿದ್ದು ರಾತ್ರಿಯಲ್ಲದೇ ಹಗಲಿನಲ್ಲಿನಲ್ಲಿಯೂ ನಿರ್ಜನ, ಒಳ ರಸ್ತೆಗಳಲ್ಲಿ ಸಂಚರಿಸುವುದು ಭಯಭೀತಿಯನ್ನು ಹುಟ್ಟಿಸಿದೆ. ಶಾಲಾ ಮಕ್ಕಳು ಬೆಳಗಿನ ಜಾವ ಸಂಜೆ ಹೊತ್ತಿನಲ್ಲಿ ದೂರದ ಹಳ್ಳಿಗಳಿಗೆ ಸಾಗಬೇಕಿದೆ. ಇಂದಿನ ಈ ಘಟನೆ ಈ ಭಾಗದ ಜನರಲ್ಲಿ ಹೆಚ್ಚು ಆತಂಕವನ್ನು ಸೃಷ್ಠಿಸಿದ್ದು ಸಂಬಂಧಪಟ್ಟ ಇಲಾಖೆಯು ಜನರೊಡಗೂಡಿ ಕೂಡಲೇ ಕ್ರಮ ವಹಿಸುವಂತೆ ಭಾರತೀಯ ಕಿಸಾನ್ ಸಂಘ ಸೇರಿದಂತೆ ರೈತಪರ ಸಂಘಟಕರು ಆಗ್ರಹಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.