ಬೆಳಗಾವಿ: ಇಲ್ಲಿನ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಆಯ್ಕೆಯಾಗಿದ್ದು ಇವರಿಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಆಗಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯದ ನಾಯಕರಿಗೆ ನೀಡುವ ಭರವಸೆ ಮೊದಲು ನೀಡಿದ್ದ ಜಾರಕಿಹೊಳಿ ಸಹೋದರರು ಅದನ್ನು ಜಾರಿಗೆ ತಂದಿದ್ದಾರೆ. ಬ್ಯಾಂಕ್ನ ನಿರ್ದೇಶಕ ಮಂಡಳಿಯಲ್ಲೂ ಲಿಂಗಾಯತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರಿಂದ ಈ ನಿರ್ಧಾರ ನಿರೀಕ್ಷಿತವಾಗಿಯೇ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತಕ್ಕಾಗಿ ಈ ಬಾರಿ ಜಾರಕಿಹೊಳಿ ಬ್ರದರ್ಸ್ ಹಾಗೂ ಶಾಸಕ ಲಕ್ಷ್ಮಣ ಸವದಿ – ಮಾಜಿ ಸಂಸದ ರಮೇಶ ಕತ್ತಿ ಬಣಗಳ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ಜಾರಕಿಹೊಳಿ ಬಣ ಬಹುಮತ ಸಾಧಿಸಿ, ಅಧ್ಯಕ್ಷ ಸ್ಥಾನವನ್ನೂ ತಮ್ಮ ವಶಪಡಿಸಿಕೊಂಡಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಅವರು ತಮ್ಮ ಮಗಳು ಪ್ರಿಯಾಂಕಾ ಅವರನ್ನು ಜೊಲ್ಲೆ ವಿರುದ್ಧ ಸ್ಪರ್ಧೆಗಿಳಿಸಿ ಗೆಲ್ಲಿಸಿದ್ದರು. ಇದೀಗ ಅದೇ ಜೊಲ್ಲೆಯನ್ನು ತಮ್ಮ ಶಿಬಿರಕ್ಕೆ ಸೆಳೆದು ಬ್ಯಾಂಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಮಾತು ಕೊಟ್ಟಂತೆ ಲಿಂಗಾಯತರಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ!

