ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 29 ಬಾಣಂತಿಯರು ಮತ್ತು 322 ನವಜಾತ ಶಿಶುಗಳು, ಮೃತಪಟ್ಟಿದ್ದು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ 111 ಹೆಚ್ಚು ಶಿಶುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಭಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಂಕರಪ್ಪ ಗಡೇದ ಅವರು, ಈ ವರ್ಷದ ಎಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ಈ ಸಾವುಗಳು ಸಂಭವಿಸಿವೆ. ರಕ್ತಸ್ರಾವದಿಂದ ಹೆಚ್ಚಿನ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಆರು ತಿಂಗಳ ಅವಧಿಯಲ್ಲಿ 322 ನವಜಾತ ಶಿಶುಗಳು ಮರಣ ಹೊಂದಿವೆ, ಅಪೌಷ್ಟಿಕತೆ, ಕಡಿಮೆ ತೂಕ, ನ್ಯೂಮೋನಿಯಾ ಮುಂತಾದವು ಸೇರಿದಂತೆ ಸೂಕ್ತ ಚಿಕಿತ್ಸೆ ಸಿಗದಿರುವುದು ಕಾರಣವಾಗಿದೆ. ಬೇರೆ ಬೇರೆ ತೊಂದರೆಯಿಂದ ಹೊರಗಿನಿಂದ ತುರ್ತು ಚಿಕಿತ್ಸೆಗೆ ಬೆಳಗಾವಿ ಆಸ್ಪತ್ರೆಗೆ ದಾಖಲಾದ ಶಿಶುಗಳಲ್ಲಿ ಶಿಶುಗಳು ಅತಿ ಹೆಚ್ಚು ಮೃತಪಟ್ಟಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮರಣ ಪ್ರಮಾಣ ಕಡಿಮೆ ಇದೆ ಎಂದು ಜಿಲ್ಲಾ ಅಧೀಕ್ಷಕ ಡಾ.ವಿಠ್ಠಲ ಶಿಂಧೆ ತಿಳಿಸಿದ್ದಾರೆ.