ನೀರಿಲ್ಲದೇ ಬಿರುಕು ಬಿಡುತ್ತಿವೆ ಬೆಳಗಾವಿ ಹೊಲಗಳು!

A B Dharwadkar
ನೀರಿಲ್ಲದೇ ಬಿರುಕು ಬಿಡುತ್ತಿವೆ ಬೆಳಗಾವಿ ಹೊಲಗಳು!

ಸಮದರ್ಶಿ ವಿಶೇಷ
ಬೆಳಗಾವಿ : ಕಳೆದ ಮೂರು ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿ ಅನುಭವಿಸಿರುವ ಬೆಳಗಾವಿ ತಾಲ್ಲೂಕಿನ ರೈತರು ಈ ವರ್ಷ ಅನಾವೃಷ್ಟಿಯಿಂದ ಪುನಃ ಬೆಳೆ ನಷ್ಟ ಅನುಭವಿಸುವ ಸಾಧ್ಯತೆಯಿದೆ.

ಇಡೀ ಜಿಲ್ಲೆಯಲ್ಲಿ ಈ ವರ್ಷ ಮಳೆ ಕಡಿಮೆಯಾಗಿದೆ. ಉತ್ತಮ ಮಳೆ ಬೆಳೆ ನಿರೀಕ್ಷಿಸಿದ್ದ ರೈತರು ಮೇ, ಜೂನ್ ತಿಂಗಳಲ್ಲೇ ಬಿತ್ತನೆಗೆ ಭೂಮಿ ಹದ ಮಾಡಿಟ್ಟಿದ್ದರು. ನೀರಿನ ಕೊರತೆಯಿಂದ ಕೆಲವು ರೈತರು ಟ್ಯಾಂಕರ್ ನೀರನ್ನು ಕೊಂಡು ಹೊಲಕ್ಕೆ ನೀರೂಣಿಸಿ ಬಿತ್ತನೆ ಮಾಡಿದ್ದರು.

ಆದರೆ ಮಳೆಯ ಕೊರತೆ ಮತ್ತು ಸರಕಾರ ಆಶ್ವಾಸನೆ ನೀಡಿದಷ್ಟು ವಿದ್ಯುತ್ ಸರಬರಾಜು ಮಾಡದಿರುವುದರಿಂದ ಮೊಳಕೆಯೊಡೆಯುತ್ತಿರುವ ಬೆಳೆ ಒಣಗುತ್ತಿದೆ. ಅಲ್ಲದೇ ಹೊಲಗಳಲ್ಲಿ ಬಿರುಕು ಕಂಡು ಬರುತ್ತಿದೆ. ಸರಕಾರ ಗ್ರಾಮೀಣ ಪ್ರದೇಶಕ್ಕೆ ಪ್ರತಿದಿನ ಏಳು ಗಂಟೆ ವಿದ್ಯುತ್ ಸರಬರಾಜು ಮಾಡುವ ಭರವಸೆ ನೀಡಿತ್ತು. ಆದರೆ ಅದಕ್ಕೆ ಬದಲಾಗಿ ಕೇವಲ 2 ತಾಸು ಅದೂ 3 ಫೇಸ್ ಮಾತ್ರ ನೀಡುತ್ತಿದೆ. ಇದರಿಂದ ಕೊಳವೆ ಮತ್ತು ತೆರೆದ ಬಾವಿಯುಳ್ಳವರೂ ಹೊಲಗಳಿಗೆ ನೀರೂಣಿಸಲು ಸಾಧ್ಯವಾಗುತ್ತಿಲ್ಲ.

ಬೆಳೆದ ಬೆಳೆ ನೀರಿಲ್ಲದೇ ಒಣಗಿ ಹಾಳಾಗಬಾರದೆಂದು ಕೊಳವೆ ಮತ್ತು ತೆರೆದ ಬಾವಿಯುಳ್ಳವರು ನೀರಿನ ಸೌಕರ್ಯವಿಲ್ಲದ ಹತ್ತಿರದ ಹೊಲಗಳಿಗೆ ನೀರು ಪೂರೈಸುತ್ತಿದ್ದರು. ಈಗ ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲದ ಕಾರಣ ಅವರಿಗೂ ನೀರು ಪೂರೈಸಲಾಗುತ್ತಿಲ್ಲ. ಹಾಗಾಗಿ ಬಿತ್ತಿದ್ದ ಬೀಜಗಳು ಸಸಿಯ ಹಂತದಲ್ಲಿದ್ದು ನೀರಿಲ್ಲದೇ ಬಾಡುತ್ತಿವೆ.

ಬೆಳಗಾವಿ ಮತ್ತು ಖಾನಾಪುರ ತಾಲೂಕು ಜಿಲ್ಲೆಯಲ್ಲೇ ಹೆಚ್ಚು ಮಳೆಯಾಗುವ ಪ್ರದೇಶಗಳು. ತರಕಾರಿ, ಭತ್ತ ಮತ್ತು ಕಬ್ಬು ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ತರಕಾರಿ ಮತ್ತು ಬಾಸುಮತಿ ಅಕ್ಕಿಗೆ ಅಂತರಾಷ್ಟ್ರೀಯ ಬೇಡಿಕೆಯಿದೆ. ಆದರೆ ನೈಸರ್ಗಿಕ ಕಾರಣಗಳಿಂದ ಅಂದರೆ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತ ಸಂಕಷ್ಟದಲ್ಲಿದ್ದಾನೆ.

ಬೆಳಗಾವಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಮದರ್ಶಿಗೆ ನೀಡಿದ ಮಾಹಿತಿಯಂತೆ, “ಕಡೋಲಿ ಗ್ರಾಮದ ಅಂದಾಜು 1,500 ಎಕರೆ ಜಮೀನಿನಲ್ಲಿ ಸುಮಾರು 1,200 ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ನೀರಿಲ್ಲದೇ ಒಣಗಿ ಹೋಗುತ್ತಿದೆ. ಸರಕಾರ ಹೇಳಿದಂತೆ ಏಳು ತಾಸು ವಿದ್ಯುತ್ ನೀಡಿದ್ದರೆ ಬೆಳೆ ಉಳಿಯುತ್ತಿದ್ದವು. ಮಳೆಯಾಗದಿರುವುದು, ನೀರಿನ ಅಲಭ್ಯತೆಯಿಂದ ಬೆಳೆ ಒಣಗುತ್ತಿವೆ”.

ಸಂಘದ ಅಧ್ಯಕ್ಷ ಅಪ್ಪಸಾಹೇಬ ದೇಸಾಯಿ ಮಾತನಾಡಿ, “ಗ್ರಾಮದಲ್ಲಿ ತರಕಾರಿ, ಭತ್ತ ಮತ್ತು ಕಡಿಮೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಭತ್ತಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ಆದರೆ ಈ ವರುಷ ಮುಂಗಾರು ಕೈ ಕೊಟ್ಟಿದೆ. ಹಿಂಗಾರಿನ ನಿಶ್ಚಯವಿಲ್ಲ. ಸರಕಾರ ಹೇಳಿದಂತೆ 7 ತಾಸು ಸತತ ವಿದ್ಯುತ್ ನೀಡಿದರೆ ರೈತ ಬದುಕಿಕೊಳ್ಳುತ್ತಾನೆ. ಇಲ್ಲದಿದ್ದರೆ ಬದುಕು ಕಷ್ಟ” ಎಂದರು.

ವಿಪರ್ಯಾಸವೆಂದರೆ, ಸಂಘದ ಅಧ್ಯಕ್ಷ ದೇಸಾಯಿ ಹೇಳುವಂತೆ ಈ ಮೊದಲು ಕಡೋಲಿಯ ಹೊಲಗಳಲ್ಲಿ ಮಳೆಗಾಲದಲ್ಲಿ ನೀರು ಮೊಣಕಾಲಿನ ಎತ್ತರಕ್ಕೆ ನಿಲ್ಲುತ್ತಿತ್ತು. ಅದರಿಂದ ಬೆಳೆದ ತರಕಾರಿ ಕೊಳೆತು ನಷ್ಟವಾಗಿದೆ. ಆದರೆ ಈ ವರ್ಷ ಪರಿಸ್ಥಿತಿ ಉಲ್ಟಾ ಆಗಿದೆ. ಸರಕಾರ ನೀಡಿರುವ ಆಶ್ವಾಸನೆಯಂತೆ ಏಳು ತಾಸು ನಿರಂತರ ವಿದ್ಯುತ್ ನೀಡಿದರೆ ರೈತ ಬದುಕುತ್ತಾನೆ ಎಂದರು.

ಮಾರುತಿ ಪಾಟೀಲ ಎಂಬ ರೈತ ತಮ್ಮ ಒಂದು ಎಕರೆ ಹೊಲದಲ್ಲಿ 20,000 ರೂಪಾಯಿ ವೆಚ್ಚಮಾಡಿ ತರಕಾರಿ ಬೆಳೆದಿದ್ದಾರೆ. ಅದೆಲ್ಲ ಈಗ ನೀರಿಲ್ಲದೇ ಬಾಡುತ್ತಿದೆ. ಸರಕಾರ ಕೊಳವೆ ಮತ್ತು ತೆರೆದ ಭಾವಿಗಳಿಂದ ನೀರೆತ್ತಲು ಅನುವಾಗುವಂತೆ ವಿದ್ಯುತ್ ಸರಬರಾಜು ಮಾಡಿದರೆ ಬೆಳೆಗಳು ಬದುಕಿಕೊಳ್ಳುತ್ತವೆ. ಇಲ್ಲದಿದ್ದರೆ ಹಿಂದಿನ ವರುಷಗಳಂತೆ ಅವುಗಳನ್ನು ರಸ್ತೆಗೆಸೆಯುವಲಾಗುವುದು ಎಂದು ತಿಳಿಸಿದರು. “ನನ್ನ ಒಂದು ಎಕರೆ ಹೊಲದಲ್ಲಿ 20,000 ರೂಪಾಯಿ ವೆಚ್ಚಮಾಡಿ ತರಕಾರಿ ಬೆಳೆದಿದ್ದೇನೆ. ಕಳೆದ ವರ್ಷ ಅತಿಯಾದ ಮಳೆಯಿಂದ ತರಕಾರಿ ಕೆಟ್ಟು ಮಾಡಿದ ವೆಚ್ಚ ಕೂಡ ಬರಲಿಲ್ಲ. ಈ ವರ್ಷವೂ ಹಾಗೆಯಾಗುವ ಸಾಧ್ಯತೆಯಿದೆ. ಪ್ರತಿ ವರ್ಷ ಒಂದಿಲ್ಲೊಂದು ಕಾರಣದಿಂದ ನಮ್ಮ ಬೆಳೆ ಹಾಳಾಗುತ್ತಿದ್ದರೆ ನಾವು ಬದುಕುವುದು ಹೇಗೆ” ಎಂದು ಪ್ರಶ್ನಿಸಿದರು.

ಬಿತ್ತನೆಗೆ ಭೂಮಿ ಸಿದ್ದಪಡಿಸಿ ಕಳೆದ ಜೂನ್ ತಿಂಗಳಲ್ಲಿ ಡ್ರೋನ್ ಯಂತ್ರದ ಮೂಲಕ ಹೊಲಕ್ಕೆ ರಸ ಗೊಬ್ಬರ ಸಿಂಪಡಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೃಷಿ ವಲಯದ ಗಮನ ಸೆಳೆದಿದ್ದ ಕಡೋಲಿಯ ಯುವ ರೈತ ರಮೇಶ ಮೈಯನಾಚೆ ಅವರು ತಮ್ಮ ಐದು ಎಕರೆ ಹೊಲದಲ್ಲಿ ಕಬ್ಬು, ತರಕಾರಿ ಮತ್ತು ಭತ್ತ ಬೆಳೆದಿದ್ದು ಬೆಳೆಗಳು ನೀರಿಲ್ಲದೇ ಬಾಡಿ ಹೋಗುತ್ತಿರುವ ಆತಂಕಕ್ಕೆ ಒಳಗಾಗಿದ್ದಾರೆ. “ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಉದ್ದೇಶದಿಂದ ಬರುವ ತಮ್ಮಂತ ಶಿಕ್ಷಿತರು ಈ ತರದ ಬೆಳವಣಿಗೆಯಿಂದ ಬೇಸತ್ತು ಇತರ ಕ್ಷೇತ್ರಗಳ ಕಡೆಗೆ ತಿರುಗಿಕೊಳ್ಳುವುದಕ್ಕೆ ಇದೂ ಕಾರಣ. ಕೃಷಿ ಕ್ಷೇತ್ರಕ್ಕೆ ಸರ್ಕಾರ ಆದ್ಯತೆ ನೀಡದಿದ್ದರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ” ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.