ಬೆಳಗಾವಿ, ಅಗಸ್ಟ 30: ಬೆಳಗಾವಿಯ ಕೆಎಲ್ ಇ ಪ್ರಭಾಕರ ಕೋರೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಶಂಕರ ಫಕೀರಪ್ಪಾ ಪರಸಣ್ಣವರ ಅವರು ಶನಿವಾರ ಮಧ್ಯಾಹ್ನ 2.45ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಮೂಲತಃ ಬೈಲಹೊಂಗಲ ತಾಲೂಕಿನ ಸಂಪಗಾವದವರಾದ ದಿವಂಗತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಕನ್ನಡ, ಹಿಂದಿ, ಮರಾಠಿ ಮತ್ತು ಇಂಗ್ಲೀಷ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ಸಾರ್ವಜನಿಕರು ಮತ್ತು ಕೆಎಲ್ ಇ ಆಸ್ಪತ್ರೆ ಮಧ್ಯೆ ಪ್ರಮುಖ ಕೊಂಡಿಯಾಗಿ ಎರಡು ದಶಕಕ್ಕಿಂತಲೂ ಅಧಿಕ ಕಾಲದಿಂದ ಕೆಲಸ ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ಅಗಲಿಕೆಯಿಂದ ಕೆಎಲ್ಇ ಆಸ್ಪತ್ರೆ ಸಿಬ್ಬಂದಿಗೆ ತೀವ್ರ ಆಘಾತವಾಗಿದ್ದು ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ರವಿವಾರ ಅಂತ್ಯಕ್ರಿಯೆ
ಶಂಕರ ಪರಸಣ್ಣವರ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ಬೆಳಗಾವಿಯ ಸದಾಶಿವನಗರ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

