ಬೆಳಗಾವಿ: ಬೈಲಹೊಂಗಲ ತಾಲೂಕು ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಘಟನೆಗೆ ಸಂಬಂಧಿಸಿ ಮೃತಪಟ್ಟ ಕಾರ್ಮಿಕರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಬುಧವಾರ ಸಂಭವಿಸಿದ ಘಟನೆಯಲ್ಲಿ ಅಂದೇ ಮೂವರು ಮೃತಪಟ್ಟಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಗುರುವಾರ ಮೃತಪಟ್ಟಿದ್ದಾರೆ.
ಬುಧವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ವಾಲ್ ರಿಪೇರಿ ಮಾಡುವಾಗ ಬಾಯ್ಲರ್ ಸ್ಫೋಟಗೊಂಡಿತ್ತು. ಬಾಯ್ಲರ್ ನಲ್ಲಿದ್ದ ಬಿಸಿ ಮಳ್ಳಿ (ಪದಾರ್ಥ) ಕಾರ್ಮಿಕರ ಮೈಮೇಲೆ ಬಿದ್ದ ಪರಿಣಾಮ ಎಂಟು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು.
ಬೈಲಹೊಂಗಲ ತಾಲೂಕು ನೇಸರಗಿ ಗ್ರಾಮದ ದೀಪಕ
ಮುನವಳ್ಳಿ (31), ಖಾನಾಪುರ ತಾಲೂಕು ಚಿಕ್ಕಮುನವಳ್ಳಿ ಗ್ರಾಮದ ಸುದರ್ಶನ ಬನೋಶಿ(25), ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಅಕ್ಷಯ ಸುಭಾಷ್ ಚೋಪಡೆ(48)ಮೃತಪಟ್ಟಿದ್ದರು.
ಗುರುವಾರದಂದು ಗೋಕಾಕ ತಾಲೂಕು ಗೊಡಚಿನಮಲ್ಕಿ ಗ್ರಾಮದ ಭರತ ಬಸಪ್ಪ ಸಾರವಾಡಿ(27), ಬೈಲಹೊಂಗಲ ತಾಲೂಕು ಅರವಳ್ಳಿ ಗ್ರಾಮದ ಮಂಜುನಾಥ ಮಡಿವಾಳಪ್ಪ ಕಾಜಗಾರ (28), ಬಾಗಲಕೋಟೆ ಜಿಲ್ಲೆ ಮರೆಗುದ್ದಿ ಗ್ರಾಮದ ಗುರುನಾಥ ಭೀರಪ್ಪ ತಮ್ಮಣ್ಣವರ (38), ಅಥಣಿ ತಾಲೂಕು ಹೂಲಿಕಟ್ಟಿಯ ಮಂಜುನಾಥ ಗೋಪಾಲ ತೇರದಾಳ (31)ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗೋಕಾಕ ತಾಲೂಕು
ಗಿಳಿಹೊಸೂರು ಗ್ರಾಮದ ರಾಘವೇಂದ್ರ ಮಲ್ಲಪ್ಪ ಗಿರಿಯಾಲ(36)ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಅವರ ಪರಿಸ್ಥಿತಿ ಚಿಂತಾ ಜನಕವಾಗಿತ್ತು.
ಮೃತ ಕಾರ್ಮಿಕ ಮಂಜುನಾಥ ತೇರದಾಳ ಅವರ ಸಹೋದರ ವಿಶ್ವನಾಥ ತೇರದಾಳ ಮಾತನಾಡಿ, ಘಟನೆಯಿಂದ ಬಹಳ ದುಃಖವಾಗಿದೆ. ಮೆಕಾನಿಕಲ್ ಇಂಜಿನಿಯರಿಂಗ್ ಆಗಿ ಎರಡು ವರ್ಷಗಳಿಂದ ನಮ್ಮ ಅಣ್ಣ ಕೆಲಸ ಮಾಡುತ್ತಿದ್ದರು. ಘಟನೆ ಬಗ್ಗೆ ಕಾರ್ಖಾನೆಯವರು ಯಾವ ಮಾಹಿತಿ ನೀಡಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ನೋಡಿ ಆಸ್ಪತ್ರೆಗೆ ಬಂದೆವು. ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು ಮೂರು ದಿನಗಳಲ್ಲಿ ಹೆರಿಗೆ ಆಗಲಿದೆ. ಅವರಿಗೆ ಗೊತ್ತಾದರೆ ಅಘಾತವಾಗುತ್ತದೆ. ಅಣ್ಣನ ಸಾವಿನ ಬಗ್ಗೆ ನಾವು ತಿಳಿಸಿಲ್ಲ. ಅವರಿಗೆ 65,000 ರೂ.ಸಂಬಳ ಇತ್ತು. ನಿವೃತ್ತಿ ಆಗುವವರೆಗೆ 3 ಕೋಟಿ ರೂಪಾಯಿ ದುಡಿಯುತ್ತಿದ್ದರು. ಆದ್ದರಿಂದ ಕಾರ್ಖಾನೆಯವರು ಇಲ್ಲಿಗೆ ಬಂದು ದೊಡ್ಡ ಮೊತ್ತದ ಪರಿಹಾರ ಪ್ರಕಟಿಸಬೇಕು. ಇಲ್ಲವಾದರೆ ಶವ ಮುಟ್ಟಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



