ಬೆಳಗಾವಿ : ಸುವರ್ಣಸೌಧದ ಪಕ್ಕದಲ್ಲಿಯೇ ಆಡಳಿತ ಸೌಧ ನಿರ್ಮಿಸಲು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ನವಂಬರ್ 1ರಂದು ಇಲ್ಲಿನ ಸುವರ್ಣಸೌಧದ ಎದರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ವಿಕಾಸ ವೇದಿಕೆ ಮುಖಂಡ ಬಿ.ಡಿ ಹಿರೇಮಠ ಅವರು ಹೇಳಿದರು.
ನಗರದ ಕನ್ನಡ ಸಾಹಿತ್ಯಭನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಸೌಧ ಆಡಳಿತವಾಗಿ ಶಕ್ತಿ ಕೇಂದ್ರವಾಗಬೇಕು.ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಕಚೇರಿಗಳು ಇಲ್ಲಿಯೇ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ, ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಉತ್ತರ ಕರ್ನಾಟಕ ಜನರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಇನ್ನಾದರೂ ಈ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದರು.
ಬೆಳಗಾವಿಯಲ್ಲಿ ಹೆಸರಿಗೆ ಮಾತ್ರ ಅಧಿವೇಶನ ನಡೆಯಬಾರದು. ಈ ಭಾಗದ ರೈತರು, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮೂಲಕ ಗಟ್ಟಿ ನಿರ್ಣಯಗಳನ್ನು ಕೈಗೊಳ್ಳಬೇಕು. ಅಲ್ಲದೆ, ಬೆಂಗಳೂರಿನ ಮಾದರಿಯಲ್ಲಿ ಸುವರ್ಣ ಸೌಧವನ್ನು ಶಕ್ತಿ ಕೇಂದ್ರವನ್ನಾಗಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ, ಗುರುರಾಜ ಹುಣಮರದ, ಎಸ್. ಬಿ. ಪಾಟೀಲ, ವಿರೂಪಾಕ್ಷ ನೀರಲಗಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

