ಬೆಂಗಳೂರು, 19: ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿದ್ದರೂ ಸಹ ಬಿಜೆಪಿಯ ಎಜೆಂಟರಂತೆ ವರ್ತಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರು ಆ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪೋಸ್ಟ ಹಂಚಿಕೊಂಡಿರುವ ಅವರು, ಜ್ಞಾನೇಶ ಕುಮಾರ ಅವರು ನಿವೃತ್ತಿಯ ನಂತರ ಬಿಜೆಪಿ ಸೇರುವ ಬದಲು ಈ ಕೂಡಲೆ ಮುಖ್ಯ ಚುನಾವಣಾ ಆಯುಕ್ತರ ಹುದ್ದೆ ತ್ಯಜಿಸಿ ಅಧಿಕೃತವಾಗಿ ಬಿಜೆಪಿ ಸೇರಿಕೊಳ್ಳಲಿ. ಆಗಲಾದರೂ ಆಯೋಗದ ವಿಶ್ವಾಸಾರ್ಹತೆ ಉಳಿಯಬಹುದು ಎಂದಿದ್ದಾರೆ.
ಚುನಾವಣಾ ಆಯೋಗ ನಡೆಸಿರುವ ಮತಗಳವನ್ನು ರಾಹುಲ್ ಗಾಂಧಿ ದಾಖಲೆಗಳ ಸಮೇತ ದೇಶದ ಜನರ ಮುಂದಿಟ್ಟಿದ್ದಾರೆ. ಆದರೂ ಆಯೋಗದ ಮುಖ್ಯ ಆಯುಕ್ತರು ಮತಗಳವಿನ ಬಗ್ಗೆ 7 ದಿನಗಳ ಒಳಗೆ ದಾಖಲೆ ಕೊಡಿ ಎಂದು ನೋಟಿಸ್ ನೀಡಿರುವುದು ನಗೆಪಾಟಲಿನ ವಿಚಾರ. ಆಯೋಗ ನೀಡಿದ ದಾಖಲೆಯ ಆಧಾರದಲ್ಲೇ ಮತಗಳವು ಪತ್ತೆ ಮಾಡಲಾಗಿದೆ. ಹೀಗಿದ್ದರೂ ಮುಖ್ಯ ಚುನಾವಣಾ ಆಯುಕ್ತರು ಲಜ್ಜೆ ಬಿಟ್ಟು ಸಮರ್ಥನೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಆಕ್ಷೇಪಿಸಿದ್ದಾರೆ.

