ನವದೆಹಲಿ : ಸುಪ್ರೀಂ ಕೋರ್ಟ್ ನೀಡಿದ ʼಬುಲ್ಡೋಝರ್ ತೀರ್ಪುʼ ಮಾನವೀಯ ಸಮಸ್ಯೆಗಳನ್ನು ನೇರವಾಗಿ ಸ್ಪರ್ಶಿಸಿದ್ದರಿಂದ ತಮಗೆ ಅಪಾರ ತೃಪ್ತಿ ನೀಡಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ.
2024ರ ನವೆಂಬರ್ 13ರಂದು, ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ʼಬುಲ್ಡೋಝರ್ ನ್ಯಾಯʼ ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸಿ, ದೇಶಾದ್ಯಂತ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು.
ಸೆಪ್ಟೆಂಬರ್ 19ರಂದು ಸುಪ್ರೀಂ ಕೋರ್ಟ್ ವಕೀಲರ ಶೈಕ್ಷಣಿಕ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಗವಾಯಿ, “ಅಪರಾಧಿ ಅಥವಾ ಆರೋಪಿಯ ಕುಟುಂಬದ ಸದಸ್ಯ ಎನ್ನುವ ಕಾರಣಕ್ಕೆ ನಿರಪರಾಧಿಗಳಿಗೆ ಕಿರುಕುಳ ನೀಡುವ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ಈ ತೀರ್ಪು ನೀಡಲಾಯಿತು. ಈ ತೀರ್ಪು ಮಾನವೀಯ ಸಮಸ್ಯೆಗಳಿಗೆ ಪರಿಹಾರ ತಂದುಕೊಟ್ಟಿದೆ. ಆದ್ದರಿಂದ ಇದು ನಮಗಿಬ್ಬರಿಗೂ ಅಪಾರ ತೃಪ್ತಿಯನ್ನು ನೀಡಿದೆ,” ಎಂದು ಹೇಳಿದರು.
ಅದೇ ವೇಳೆ, ತೀರ್ಪಿನ ಶ್ಲಾಘನೀಯ ನಿರೂಪಣೆಗಾಗಿ ಸಮಾನ ಗೌರವ ನ್ಯಾಯಮೂರ್ತಿ ವಿಶ್ವನಾಥನ್ ಅವರಿಗೆ ಸಲ್ಲುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಮೂರ್ತಿಯ ಅಧಿಕಾರಾವಧಿಯು ದೀರ್ಘವಾಗಿರುವುದಕ್ಕಿಂತ ಆ ವೇಳೆ ಮಾಡುವ ಕಾರ್ಯದ ಗುಣಮಟ್ಟವೇ ಮುಖ್ಯವೆಂದು ಸಿಜೆಐ ಗವಾಯಿ ಅಭಿಪ್ರಾಯಪಟ್ಟರು.
“ಅಲ್ಪಾವಧಿ ಅಧಿಕಾರ ವಹಿಸಿಕೊಂಡಿದ್ದರೂ, ಉ.ಯು. ಲಲಿತ್ ಮತ್ತು ಸಂಜೀವ್ ಖನ್ನಾ ಅವರಂತಹ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಛಾಪು ಮೂಡಿಸಿದ್ದಾರೆ. ನ್ಯಾಯಾಂಗದ ಆಡಳಿತ ಅಧಿಕಾರಾವಧಿಯಲ್ಲಿನ ದಕ್ಷತೆಯೇ ನಿರ್ಣಾಯಕ” ಎಂದರು.
ದೇಶದಾದ್ಯಂತ ನ್ಯಾಯಾಂಗ ಮೂಲಸೌಕರ್ಯ ಸುಧಾರಣೆ, ಹೈಕೋರ್ಟ್ಗಳಲ್ಲಿ ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸುವುದು ಹಾಗೂ ನ್ಯಾಯ ವಿತರಣಾ ವ್ಯವಸ್ಥೆ ಬಲಪಡಿಸುವುದನ್ನು ತಾವು ಆದ್ಯತೆಯಾಗಿ ಕೈಗೊಂಡಿದ್ದಾಗಿ ಸಿಜೆಐ ಗವಾಯಿ ಹೇಳಿದರು.
ಇದಲ್ಲದೆ, ಸುಪ್ರೀಂ ಕೋರ್ಟ್ನಲ್ಲಿ ಯುವ ವಕೀಲರಿಗೆ ಹೆಚ್ಚಿನ ಅವಕಾಶ ಒದಗಿಸುವ ಮೂಲಕ ನ್ಯಾಯಾಂಗದ ಭವಿಷ್ಯ ಬಲಪಡಿಸಲು ಪ್ರಯತ್ನಿಸಿದ್ದಾಗಿ ಅವರು ಸ್ಪಷ್ಟಪಡಿಸಿದರು. “ಯುವ ವಕೀಲರಿಗೆ ಸಿಗುವ ಅನುಭವ ಹೈಕೋರ್ಟ್ ಮಟ್ಟದಲ್ಲಿ ಅವರ ದಕ್ಷತೆಯನ್ನು ವೃದ್ಧಿಸಲು ನೆರವಾಗಲಿದೆ” ಎಂದು ಗವಾಯಿ ವಿಶ್ವಾಸ ವ್ಯಕ್ತಪಡಿಸಿದರು.

