ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಮುಖಂಡ, ಎಂಎಲ್ ಸಿ ಸಿ ಟಿ. ರವಿ ಅವರನ್ನು ಶುಕ್ರವಾರ (ಡಿ.20) ಬೆಳಿಗ್ಗೆ ಬೆಳಗಾವಿಯ ಜೆಎಂಎಫ್ ಸಿ 5ನೇ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು, ಈ ಸಂದರ್ಭದಲ್ಲಿ ಜಾಮೀನು ಅರ್ಜಿಯ ವಾದ ಆಲಿಸಿದ ನಂತರ ನ್ಯಾಯಾಧೀಶರು ಜಾಮೀನು ಆದೇಶ ಕಾಯ್ದಿರಿಸಿ, ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಟಿ.ರವಿ ಪರ ವಕೀಲರ ವಾದವೇನು?
ಗುರುವಾರ ಸಂಜೆ 6-30ಕ್ಕೆ ಸುವರ್ಣ ಸೌಧದಲ್ಲಿ ಪೊಲೀಸರು ರವಿ ಅವರನ್ನು ಬಂಧಿಸಿದ್ದಾರೆ. ನಂತರ ಪೊಲೀಸರು ಜೀಪನಲ್ಲಿ ರಾತ್ರಿಯಿಡೀ ಮೂರು ಜಿಲ್ಲೆ ಸುತ್ತಿಸಿದ್ದಾರೆ. ಪೊಲೀಸರು ಯಾವುದೇ ನಿಯಮವನ್ನು ಸರಿಯಾಗಿ ಪಾಲಿಸಿಲ್ಲ. ಆರೋಪಿಯನ್ನು ಜಾಮೀನು ರಹಿತ ಪ್ರಕರಣದಲ್ಲಿ ಬಂಧಿಸಿದಾಗ, ಸೆಕ್ಷನ್ 480 ಅಡಿ ಜಾಮೀನಿಗೆ ಮನವಿ ಸಲ್ಲಿಸಲು ಅವಕಾಶವಿದೆ. ಸಿಟಿ ರವಿ ಸಾಮಾನ್ಯ ವ್ಯಕ್ತಿಯೂ ಅಲ್ಲ, ರೌಡಿಯೂ ಅಲ್ಲ. ಅವರೊಬ್ಬ ಜನಪ್ರತಿನಿಧಿ ಎಂದು ಬೆಳಗಾವಿ ಜೆಎಂಎಫ್ ಸಿ ಕೋರ್ಟನಲ್ಲಿ ಸಿ.ಟಿ.ರವಿ ಪರ ವಕೀಲ ಎಂ.ಬಿ.ಜಿರಲಿ ಅವರು ವಾದ ಮಂಡಿಸಿದ್ದಾರೆ.
ರವಿ ಜಾಮೀನು ಅರ್ಜಿ ವಾದ ಆಲಿಸಿದ ನಂತರ ಜೆಎಂಎಫ್ ಸಿ ಕೋರ್ಟ ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 3ಗಂಟೆಗೆ ಮುಂದೂಡಿದರು. ಮಧ್ಯಾಹ್ನ ರಾಜ್ಯ ಸರ್ಕಾರದ ಪರ ವಕೀಲರ ವಾದ ಆಲಿಸಲಿದ್ದಾರೆ.
ನ್ಯಾಯಾಲಯದಲ್ಲಿ ರವಿ ಹೇಳಿದ್ದು
———————
ಇದಕ್ಕೂ ಮೊದಲು 11 ಗಂಟೆಗೆ ನ್ಯಾಯಾಧೀಶರು ಕೋರ್ಟ ಹಾಲ್ ಗೆ ಆಗಮಿಸಿ ರವಿ ಅವರ ಪ್ರಕರಣವನ್ನು ಮೊದಲಿಗೆ ತೆಗೆದುಕೊಂಡರು. ಸಾಕ್ಷಿ /ಹೇಳಿಕೆ ಸೆಲ್ ನಲ್ಲಿ ಕೈ ಮುಗಿದು ನಿಂತಿದ್ದ ರವಿಗೆ ನ್ಯಾಯಾಧೀಶರು ಹೆಸರು, ಊರು, ವೃತ್ತಿ ಕೇಳಿದ ನಂತರ ರವಿ ತಮ್ಮೊಂದಿಗೆ ಪೊಲೀಸರು ನಡೆದುಕೊಂಡ ರೀತಿ ವಿವರಿಸಿದರು. “ಗುರುವಾರ ಸಂಜೆ ಸುಮಾರು 6.30ಕ್ಕೆ ಪೊಲೀಸರು ನನ್ನನ್ನು ಸುವರ್ಣ ವಿಧಾನಸೌಧದಲ್ಲಿ ಅರೆಸ್ಟ ಮಾಡಿದರು, ನಂತರ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಜೀಪಿನಲ್ಲಿ ತೆಗೆದುಕೊಂಡು ಹೋದರು. ಅಲ್ಲಿಂದ ನಂದಗಡ ಪೊಲೀಸ್ ಠಾಣೆಗೆ, ಮುಂದೆ ಖಾನಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಸಿದುಕೊಂಡರು. ಆಮೇಲೆ ನಾನು ನನ್ನ ಕೈಗೆ ಹಾಕಿಕೊಂಡಿದ್ದ ಸ್ಮಾರ್ಟ ಗಡಿಯಾರದಲ್ಲಿ ಮಾತನಾಡುತ್ತಿದ್ದಾಗ ಅದನ್ನೂ ಕಸಿದುಕೊಳ್ಳಲು ಪ್ರಯತ್ನಿಸಿದರು. ಅಲ್ಲಿ ನನ್ನ ಮೇಲೆ ಮೂರು ಸಲ ದೈಹಿಕ ಹಲ್ಲೆ ಮಾಡಲಾಯಿತು. ಹಲ್ಲೆ ಯಾರು ಮಾಡಿದರೊ ಗೊತ್ತಿಲ್ಲ. ಸುತ್ತಲೂ ಹೆಚ್ಚು ಪೊಲೀಸರಿದ್ದರಿಂದ ಅವರೇ ಮಾಡಿರಬಹುದು ಎಂದರು.
ಪೊಲೀಸರಿಗೆ ಪ್ರತಿ 10 ನಿಮಿಷಕ್ಕೊಮ್ಮೆ ಫೋನ್ ಬರುತ್ತಿತ್ತು, ಅದರಂತೆ ಪೊಲೀಸರು ನಡೆದುಕೊಳ್ಳುತ್ತಿದ್ದರು. ನಂತರ ನನ್ನನ್ನು ಪೊಲೀಸ್ ಜೀಪಿನಲ್ಲಿ ಹಾಕಿಕೊಂಡು ರಾತ್ರಿಯಿಡಿ ಮುಖ್ಯ ಮತ್ತು ಉಪ ರಸ್ತೆಗಳಲ್ಲಿ ಸುತ್ತಾಡಿಸಿದ್ದಾರೆ. ಹಿರೇ ಬಾಗೇವಾಡಿ ಪೊಲೀಸರು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಎಂದೂ ತಿಳಿಸಿಲ್ಲ, ಅಲ್ಲದೇ ವಿಧಾನಸೌಧದಲ್ಲೇ ಕೆಲವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ನಾನು ನೀಡಿದ ದೂರನ್ನೂ ಸ್ವೀಕರಿಸಿಲ್ಲ. ಬೆಳಗಿನ ಜಾವದ ವರೆಗೆ ನನ್ನನ್ನು ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟ ಜಿಲ್ಲೆಯಲ್ಲಿ ಸುತ್ತಾಡಿಸಿ ಮುಂಜಾನೆ ಯರಗಟ್ಟಿಯ ಢಾಬಾವೊಂದರಲ್ಲಿ ಉಪಹಾರ ಮಾಡಿಸಿ ನಂತರ ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿಯ ಮುತಗಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸನೆ ಮಾಡಿದ ನಂತರ ಬೆಳಗಾವಿಗೆ ತರಲಾಯಿತು. ರಾತ್ರಿ ಊಟವನ್ನೂ ಮಾಡಿಸಿಲ್ಲ” ಎಂದು ರವಿ ತಿಳಿಸಿದರು.
ನ್ಯಾಯಾಲಯದ ಹಾಲ್ ನಲ್ಲಿ ಬಿಜೆಪಿ ಮುಖಂಡರಾದ ಆರ್ ಅಶೋಕ, ವಿಜಯೇಂದ್ರ, ಅರವಿಂದ ಬೆಲ್ಲದ ಮತ್ತು ಇತರರು ಹಾಜರಿದ್ದರು.
ಮೂರು ಗಂಟೆಗೆ ಸರಕಾರದ ಪರ ವಕೀಲರ ವಾದ ನಡೆಯಲಿದೆ.