ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ ಸೈಬರ್ ವಂಚಕರು ಉಪ ಆಯುಕ್ತರಿಗೆ ವಂಚನೆ ಮಾಡಲು ಯತ್ನಿಸಿರುವ ವಿಷಯ ಬಹಿರಂಗವಾಗಿದೆ. ಆಯುಕ್ತರ ಹೆಸರು ಬಳಸಿ ವಾಟ್ಸಪ್ ಮೂಲಕ ಪಾಲಿಕೆ ಉಪ ಆಯುಕ್ತ ಉದಯ ಕುಮಾರ್ ತಳವಾರಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಫೋಟೊ ಡಿಪಿ ಇಟ್ಟಿರೋ ವಾಟ್ಸಪ್ ನಿಂದ ಮೆಸೇಜ್ ಮಾಡಿ ತುರ್ತಾಗಿ 50,000 ರೂಪಾಯಿ ಅಕೌಂಟ್‌ಗೆ ಹಾಕಿ, ನಾನು ಮೀಟಿಂಗ್‌ನಲ್ಲಿರುವೆ, ಹಣ ಹಾಕಿ ಸ್ಕ್ರೀನ್ ಶಾಟ್ ಕಳಿಸುವಂತೆ ಸಂದೇಶ ಕಳುಹಿಸಿದ್ದಾರೆ. ಮೆಸೇಜ್ ನೋಡಿ ಉಪ ಆಯುಕ್ತ ಉದಯಕುಮಾರ್ ತಳವಾರ, ಹಣ ಕೇಳಿದ ತಕ್ಷಣವೇ ಆ ನಂಬರ್‌ಗೆ ವಾಟ್ಸಪ್ ಕಾಲ್ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದೇ ಮೀಟಿಂಗ್‌ನಲ್ಲಿದ್ದೇನೆ ಎಂದು ವಂಚಕನಿಂದ ಮೇಸೆಜ್ ಮಾಡಲಾಗಿದೆ. ಅನುಮಾನಗೊಂಡ ಉಪ ಆಯುಕ್ತ ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಪರ್ಸನಲ್ ನಂಬರ್ ಗೆ ಕರೆ ಮಾಡಿದ್ದಾರೆ. ಆಗ ಮಾಹಿತಿ ತಿಳಿದ ಪಾಲಿಕೆ ಆಯುಕ್ತರು ಶಾಕ್ ಆಗಿದ್ದಾರೆ. ಉಪ ಆಯುಕ್ತ ಉದಯ ಕುಮಾರ ಅವರು ಕೂಡಲೇ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



