ಬೆಳಗಾವಿ: ವ್ಯಕ್ತಿಯೊಬ್ಬರು ಜೀವಂತವಿದ್ದರೂ ಅವರ ಮರಣ ಪ್ರಮಾಣಪತ್ರ ನೀಡಿದ ಘಟನೆ ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೌದು… ತುಂತುರು ಹನಿ ನೀರಾವರಿ ಯೋಜನೆಗೆ ಅರ್ಜಿ ಕೊಡಲು ಮುರಗೋಡ ಕೃಷಿ ಇಲಾಖೆಗೆ ಹೋದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದ ಈಶ್ವರ ನಾಗಪ್ಪ ಅಬ್ಬಾಯಿ ಎಂಬವರು ಜೀವಂತವಿದ್ದರೂ ಗ್ರಾಮಲೇಕ್ಕಾಧಿಕಾರಿ ನೀಲಾ ಮೂರಗೋಡ(ಬಾನಿ) ಎಂಬುವರ ಎಡವಟ್ಟಿನಿಂದ ಇವರ ಮರಣ ಹೊಂದಿದ್ದಾರೆಂದು ತಹಶೀಲ್ದಾರ್ ಕಚೇರಿಯಲ್ಲಿ ದಾಖಲಾಗಿದೆ. ಈ ನೊಂದ ವ್ಯಕ್ತಿ ದೋಷ ಸರಿಪಡಿಸುವಂತೆ ಮುರಗೋಡ ನಾಡ ಕಚೇರಿ ಹಾಗೂ ಸವದತ್ತಿ ತಹಶೀಲ್ದಾರ್ ಚೇರಿಗಳಿಗೆ 5 ತಿಂಗಳಿನಿಂದ ಅಲೆದಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
2021ರಲ್ಲಿ ಮರಣ ಪ್ರಮಾಣ ಪತ್ರ ದಾಖಲು: ಸುತಗಟ್ಟಿ ಗ್ರಾಮದ ಈಶ್ವರ ನಾಗಪ್ಪ ಅಬ್ಬಾಯಿ ಎಂಬವರು ರೈತರಾಗಿದ್ದು, ತಾವು ಮಾತ್ರ ಈಗಲೂ ಕೃಷಿಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಈ ವ್ಯಕ್ತಿ ಮರಣ ಹೊಂದಿದ್ದಾರೆ ಎಂದು 08-07-2021ರಂದು ಮರಣ ಪ್ರಮಾಣಪತ್ರ ದಾಖಲು ಮಾಡಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಇಷ್ಟೇ ಅಲ್ಲದೆ ತಾವು ಮಾಡಿದ ಯಡವಟ್ಟುನ್ನು ಮುಚ್ಚಿ ಹಾಕಲು ಅಧಿಕಾರಿಗಳು ಈ ದಾಖಲೆಯನ್ನು ಸರಿ ಪಡಿಸಲಾಗುವುದು ಎಂದು ಹಾರಿಕೆ ಉತ್ತರ ನೀಡಿ ನೊಂದ ವ್ಯಕ್ತಿಗೆ ಕಳುಹಿಸಿ ಕೊಟ್ಟು ಕೈ ತೊಳೆದುಕೊಂಡಿದ್ದಾರೆ.
ಕಚೇರಿಗೆ ನಿತ್ಯ ಅಲೆದರೂ ರದ್ದಾಗದ ಮರಣ ಪ್ರಮಾಣ ಪತ್ರ: ಇತ್ತ ತನ್ನ ಮರಣ ಪ್ರಮಾಣಪತ್ರವನ್ನು ರದ್ದು ಪಡಿಸುವಂತೆ ಈಶ್ವರ ಅಬ್ಬಾಯಿ ಕಳೆದ 5 ತಿಂಗಳಿಂದ ಮುರಗೋಡ ನಾಡ ಕಚೇರಿ ಸೇರಿದಂತೆ ಸವದತ್ತಿ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದರೂ ಮರಣ ಪ್ರಮಾಣಪತ್ರ ರದ್ದಾಗಿಲ್ಲ. ಜೀವಂತ ಇದ್ದರೂ ತನಗೆ ಮರಣ ಪ್ರಮಾಣಪತ್ರ ನೀಡಿದ್ದರಿಂದ ಅವರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಎಂದು ಈಶ್ವರ ಅಬ್ಬಾಯಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಎ
ಚ್ಚೆತ್ತಕೊಳ್ಳದ ಅಧಿಕಾರಿಗಳು: ಕಳೆದ 5 ತಿಂಗಳಿಂದ ಮರಣ ಪ್ರಮಾಣ ಪತ್ರ ರದ್ದು ಪಡಿಸುವಂತೆ ಈಶ್ವರ ಅಬ್ಬಾಯಿ ಮನವಿ ಸಲ್ಲಿಸಿದ್ದರೂ ಮುರಗೋಡ ನಾಡ ಕಚೇರಿ ಹಾಗೂ ಸವದತ್ತಿ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಅತ್ತ ಇತ್ತ ಕಡೆಗೆ ಕೈ ತೋರಿಸಿ ಬಚಾವ್ ಆಗಿದ್ದರು. ಯಾವಾಗ ಪತ್ರಕರ್ತರಿಗೆ ಈ ವಿಷಯ ತಿಳಿದಿದೆ ಎಂದು ಗೊತ್ತಾದ ತಕ್ಷಣ ಅಲರ್ಟ್ ಆಗಿ ಮರಣ ಪ್ರಮಾಣಪತ್ರ ರದ್ದು ಪಡಿಸಲು ಸಂಬಂಧಿಸಿದ ಇಲಾಖೆಯ ಬಾಗಿಲು ಬಡಿಯುತ್ತಿರುವ ವಿಷಯ ತಿಳಿದು ಬಂದಿದೆ. ಜೀವಂತ ಇದ್ದರೂ ಮರಣ ಪ್ರಮಾಣ ಪತ್ರ ನೀಡಿ ಯಡವಟ್ಟು ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿರುವ ಬಗ್ಗೆ ದೂರು ಬಂದಿದ್ದು, ಈಗ ಮರಣ ಪ್ರಮಾಣಪತ್ರ ನೋಂದಣಿ ಆಗಿರುವುದು ಗೊತ್ತಾಗಿದೆ. ಯಾವ ಉದ್ದೇಶದಿಂದ ಬದುಕಿರುವ ವ್ಯಕ್ತಿಯ ಮರಣ ಪ್ರಮಾಣಪತ್ರ ನೋಂದಣಿ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ಮೇಲೆ ಕ್ರಮ ವಹಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುತಗಟ್ಟಿ ಗ್ರಾಮಲೇಕ್ಕಾಧಿಕಾರಿಗೆ ನೋಟಿಸ್ ನೀಡಲಾಗಿದೆ.
-ಮಲ್ಲಿಕಾರ್ಜುನ ಹೆಗ್ಗನವರ, ಸವದತ್ತಿ ತಹಶೀಲ್ದಾರ್
ಸುತಗಟ್ಟಿ ಗ್ರಾಮದಲ್ಲಿ ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಶೀಘ್ರವೇ ಈ ಪ್ರಕರಣದ ಕುರಿತು ಮಾಹಿತಿ ಪಡೆದು ಎಡವಟ್ಟು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು.
.-ಪ್ರವೀಣ ಜೈನ್ , ಬೈಲಹೊಂಗಲ ಉಪವಿಭಾಗಾಧಿಕಾರಿ



