ಧಾರವಾಡ : ಬಾಲ್ಯ ಇರುವಾಗಲೇ ನಾಳೆ ನಾವು ಏನಾಗಬೇಕು ಎಂಬುದರ ಹುಡುಕಾಟವನ್ನು ಪ್ರಾರಂಭಿಸಬೇಕು. ಹೀಗೆ ಪ್ರಾರಂಭದಲ್ಲಿಯೇ ಹುಡುಕಾಟದ ಕುತುಹಲವನ್ನು ಉಳಿಸಿಕೊಳ್ಳುತ್ತಾ ಬೆಳೆದವರೆಲ್ಲಾ ಜಗತ್ತಿಗೆ ಮಾರ್ಗದರ್ಶಿಸಿದ್ದಾರೆ, ಬೆಳಕನ್ನು ನೀಡಿದ್ದಾರೆ ಎಂದು ಬಾಲಬಳಗದ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಹೇಳಿದರು.
ಚಿಲಿಪಿಲಿ ಸಂಸ್ಥೆಯು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಐದು ದಿನಗಳ ಚಿಣ್ಣರ ದಸರಾ ಮೇಳದ ಸಮಾರೋಪದಲ್ಲಿ ನಾಟಕ-ನೃತ್ಯಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಇಂಗ್ಲೆಂಡಿನ ಜೇನಗುಡಾ ಮಹಿಳೆಯು ಎಂಟು ವರ್ಷದ ಬಾಲ್ಯವಿದ್ದಾಗ ಅವಳ ಹುಟ್ಟುಹಬ್ಬದ ಸಂದರ್ಭದಲ್ಲಿ ಚಂಪಾಂಜಿಯ ಗೊಂಬೆಯನ್ನು ಯಾರೋ ನೀಡಿದ್ದನ್ನು ಜೋಪಾನವಾಗಿ ಇಟ್ಟುಕೊಂಡು ಚಿಂಪಾಂಜಿಯ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ನಡೆದಳು.
ಚಿಂಪಾಜಿಯನ್ನು ಜೀವಂತ ನೋಡಬೇಕು ಎಂದು ಕನಸು ಕಾಣಲು ಶುರು ಮಾಡುತ್ತಾಳೆ. ಮುಂದೆ ಅವಳು ಹಟ ಹಿಡಿದು ಇಂಗ್ಲೆಂಡ್ ನಿಂದ ಆಫ್ರಿಕಕ್ಕೆ ಒಬ್ಬಳೇ ಇಪ್ಪತ್ತು ವರ್ಷದವಳಿದ್ದಾಗಲೇ ಜಾಂಬಿಯಾ ದೇಶಕ್ಕೆ ಬಂದು ಚಿಂಪಾಂಜಿಗಳ ಅಧ್ಯಯನ ಮಾಡಿ ಅವುಗಳೊಟ್ಟಿಗೆ ಇದ್ದು, ಜಗತ್ತಿಗೆ ಚಿಂಪಾಂಜಿ ಉಳಿಸಿಕೊಳ್ಳಲು ದೊಡ್ಡ ಕಾರ್ಯಮಾಡಿ ಜಗತ್ತಿನಲ್ಲಿ ಯಾರೂ ಮಾಡದ ಅಧ್ಯಯವನ್ನು ಚಿಂಪಾಜಿ ಬಗ್ಗೆ ಮಾಡಿ ಅವುಗಳನ್ನು ಉಳಿಸಲು ಕಾರಣಳಾದಳು. ಮಕ್ಕಳು ಬಾಲ್ಯದಲ್ಲಿಯೇ ಕನಸುಗಳನ್ನು ಕಟ್ಟಿಕೊಳ್ಳಬೇಕು. ಕನಸುಗಳು ನನಸಾಗುವಂತೆ ತೊಡಗಿಸಿಕೊಳ್ಳಬೇಕು. ನನಸಾದರೆ ಸಾಧನೆಯಾಗುತ್ತದೆ, ನನಸಾಗದಿದ್ದರೆ ಅನುಭವವಾಗುತ್ತದೆ. ಯಾವುದು ವ್ಯರ್ಥವಾಗುವುದಿಲ್ಲ. ವಿದ್ಯುತ್ ಬಲ್ಬ್ ಕಂಡು ಹಿಡಿದ ಥಾಮಸ್ ಎಡಿಸನ್ ವಿದ್ಯುತ್ ಬಲ್ಬದಲ್ಲಿ ಬೆಳಕು ಮೂಡಲು ಸಾವಿರಸಲ ಪ್ರತ್ನಮಾಡಿ ಸಾವಿರದ ಒಂದನೇ ಸಲ ಯಶಸ್ವಿಯಾದ.
ಹಾಗೆ ಮಕ್ಕಳು ಕಟ್ಟಿಕೊಂಡ ಕನಸನ್ನು ನನಸು ಮಾಡಲು ಸತತ ಪ್ರಯತ್ನ ಮಾಡುತ್ತಲೇ ಇರಬೇಕು. ಪಾಲಕರಾದವರು ಮಕ್ಕಳು ಮಕ್ಕಳಿಗೆ ಸಣ್ಣ ಸಣ್ಣ ಅವಕಾಶಗಳನ್ನು ಮಕ್ಕಳಿಗೆ ನೀಡುತ್ತಾ ಹೋಗುವುದನ್ನು ಮರೆಯಬೇಡಿ. ಆ ಮೂಲಕ ಮಕ್ಕಳು ಕನಸುಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿಲ್ಲಿ ರಾಜ್ಯದಲ್ಲಿಯೇ ಮುಂಚುಣಿಯಲ್ಲಿರುವ ಸಂಸ್ಥೆ ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ. ಸದಾ ಮಕ್ಕಳಿಗಾಗಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಪಾಲಕರಾದವರು ಮಕ್ಕಳನ್ನು ಇಂದು ತುಂಬಾ ಕಾಳಜಿಯೊಂದಿಗೆ ಅವರ ಬೆಳವಣಿಗೆಯನ್ನು ಗಮನಿಸಬೇಕಾಗಿದೆ.
ಇಂದು ಮಕ್ಕಳ ಮನಸ್ಸು ತುಂಬ ಸೂಕ್ಷ್ಮವಾಗಿರುತ್ತದೆ. ಬಹಳ ಎಚ್ಚರಿಕೆಯಿಂದ ಮಕ್ಕಳ ಮನಸನ್ನು ತಿಳಿಸುವ ಕಾರ್ಯವಾಗಬೇಕು. ಅವರ ಮನಸಿನ ಭಾವನೆಗಳನ್ನು ಗೌರವಿಸುತ್ತಾ ಮಾರ್ಗದರ್ಶಿಸುವಂತಾಗಬೇಕು. ಮಕ್ಕಳು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂವಹನ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯ. ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಅರಿವು ಮೂಡಿಸುವಂತೆ ಅವರನ್ನು ಬೇರೆ ಬೇರೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದರು.
ಶಂಕರ ಹಲಗತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಲ್ಲಪ್ಪ ಬೆಂಡಿಗೇರಿ, ಎಚ್.ಎಫ್. ಸಮುದ್ರಿ ಉಪಸ್ಥಿತರಿದ್ದರು. ಜನಪದ ಕಲಾವಿದೆ ಪ್ರಮೀಳಾ ಜಕ್ಕನ್ನವರ, ಬೆಂಗಳೂರಿನ ನಾಟಕಕಾರ ಶಿವಕುಮಾರ, ರಂಗ ಸಾಮ್ರಾಟ ಶಾಲೆಯ ಸಿಕಂದರ ದಂಡೀನ, ಶೃತಿ ಹುರಳಿಕೊಪ್ಪಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಮಾಡಿ ಒಂದು ಮೊಬೈಲ್ ಕಥೆ, ಬೆಳಕು ತಂದ ಬಾಲಕ, ಮುಟ್ಟುತ್ತೇವೆ ಆಕಾಶ ರೂಪಕ ಹಾಗೂ ನೃತ್ಯಗಳನ್ನು ಮಕ್ಕಳಿಂದ ಪ್ರದರ್ಶನ ಕಾಣುವಂತೆ ಮಾಡಿದರು. ವಿ.ಎನ್. ಕೀರ್ತಿವತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

