ಕಲಬುರಗಿ : ಕುಡಿತದ ಚಟ ಬಿಡಿಸಲು ನಾಟಿ ಔಷಧ ಸೇವಿಸಿದ್ದ ಸೇಡಂ ತಾಲೂಕಿನ ಇಮಡಾಪೂರ ಗ್ರಾಮದಲ್ಲಿ ಮೂವರು ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ಇದೇ ಔಷಧ ಸೇವಿಸಿದ ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತರನ್ನು ಸೇಡಂ ತಾಲೂಕಿನ ಬುರುಗಪಲ್ಲಿ ಗ್ರಾಮದ ಲಕ್ಷ್ಮೀ ನರಸಿಂಹಲು (45), ಶಹಬಾದ ಪಟ್ಟಣದ ಗಣೇಶ ಬಾಬು ರಾಠೋಡ (24) ಮತ್ತು ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಕುಡಿತದ ಚಟವನ್ನು ಬಿಡಲು ಸ್ಥಳೀಯವಾಗಿ ಲಭ್ಯವಾದ ನಾಟಿ ಔಷಧವನ್ನು ಸೇವಿಸಿದ್ದರು. ಆದರೆ, ಔಷಧ ಸೇವಿಸಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಕುಡಿತದ ಚಟ ಬಿಡಿಸುತ್ತೇನೆ ಎಂದು ಮದ್ಯ ವ್ಯಸನಿಗಳ ಮೂಗಿನಲ್ಲಿ ನಾಟಿ ಔಷಧಿ ಹಾಕಿದ್ದರು. ಈ ಔಷಧಿಯಿಂದ ಲಕ್ಷ್ಮೀ ನರಸಿಂಹಲು ಹಾಗೂ ಗಣೇಶ ಬಾಬು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದೇ ಔಷಧವನ್ನು ಸೇವಿಸಿದ ಲಕ್ಷ್ಮೀ ನರಸಿಂಹಲು ಪುತ್ರ ನಿಂಗಪ್ಪ ನರಸಿಂಹಲು ಗಂಭೀರ ಸ್ಥಿತಿಯಲ್ಲಿದ್ದು, ಕಲಬುರಗಿಯ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮದರ್ಶಿಯ ಮನವಿ : ಸುರಕ್ಷಿತವಲ್ಲದ ಅನಧಿಕೃತ ಯಾವುದೇ ಔಷಧಿಯನ್ನು ಸೇವಿಸುವ ಮುನ್ನ ವೈದ್ಯಕೀಯ ಸಲಹೆ ಪಡೆಯಿರಿ.

