ಬೆಳಗಾವಿ, ನ.೧: ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರ್ನಾಟಕ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಉದ್ಧವ ಠಾಕರೆ ಬಣದ ಶಿವಸೇನಾ ಕಾರ್ಯಕರ್ತರು ಬೆಳಗಾವಿಯ ಬೆಳಗಾವಿಯ ದಕ್ಷಿಣದಲ್ಲಿ ಪರ್ಯಾಯ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು.
ಮಹಿಳೆಯರು, ಮಕ್ಕಳನ್ನು ಮುಂದೆ ಮಾಡಿ ಕಪ್ಪು ಧಿರಿಸು ಧರಿಸಿ, ಕಪ್ಪು ಬಾವುಟದೊಂದಿಗೆ ಕರ್ನಾಟಕದ ವಿರುದ್ಧ ಘೋಷಣೆ ಕೂಗಿದರು. ವಿಷಾದಕರವೆಂದರೆ ಅನುಮತಿ ನೀಡದ ಪೊಲೀಸ್ ಇಲಾಖೆಯೇ ನಾಡ ವಿರೋಧಿ ಮೆರವಣಿಗೆಗೆ ಭದ್ರತೆ ಒದಗಿಸಿತು. ಎಂಇಎಸ್ ಗೆ ಕರಾಳ ದಿನಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನೀಡದಿದ್ದರೂ ಶನಿವಾರ ಎಂಇಎಸ್ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಸೇರಿ ಕರಾಳ ದಿನ ಆಚರಿಸಿದರು.
ಬೆಳಗಾವಿ ಸೇರಿದಂತೆ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೇ, ಇತ್ತ ಪುಂಡ ಎಂಇಎಸ್ ಬೆಳಗಾವಿಯ ಧರ್ಮವೀರ ಸಂಭಾಜಿ ಮೈದಾನದಲ್ಲಿ ಸೇರಿ ಅಲ್ಲಿಂದ ಕರಾಳ ದಿನಾಚರಣೆಗೆ ಕಪ್ಪು ಬಟ್ಟೆ ಧರಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಸಂಭಾಜಿ ಮೈದಾನದಿಂದ, ಭಾತಕಾಂಡೆ ಸ್ಕೂಲ್ ಮುಂತಾದೆಡೆ ಜಾಥಾದಲ್ಲಿ ತೆರಳಿ ಮರಾಠ ಮಂಗಲ ಕಾರ್ಯಾಲಯದಲ್ಲಿ ಸಭೆಯಾಗಿ ಮಾರ್ಪಡಿಸಿದರು. ಮೆರವಣಿಗೆ ಉದ್ದಕ್ಕೂ ಬೀದರ, ಭಾಲ್ಕಿ, ನಿಪ್ಪಾಣಿ, ಬೆಳಗಾವಿ, ಕಾರವಾರ ನಮ್ಮದೇ ಎಂದು ಘೋಷಣೆ ಕೂಗಿದ ಪುಂಡರು, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಹಾಕಿ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದರು.
ಭಾಷಾವಾರು ಪ್ರಾಂತ್ಯ ರಚನೆ ವೇಳೆ, ನಮಗೆ ಕೇಂದ್ರದಿಂದ ಅನ್ಯಾಯವಾಗಿದೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮನೋಹರ ಕಿಣೇಕರ, ರಮಾಕಾಂತ ಕೊಂಡೂಸ್ಕರ, ಪ್ರಕಾಶ ಶಿರೋಳಕರ, ಅಮರ ಯಳ್ಳೂರಕರ, ಸರಿತಾ ಪಾಟೀಲ, ಸರಸ್ವತಿ ಪಾಟೀಲ, ರೇಣು ಕಿಲ್ಲೇಕರ ಆದಿ ಮುಖಂಡರು ಇತರರಿದ್ದರು.
ಎಂಇಎಸ್ ವಿರುದ್ಧ ಕ್ರಮ
ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಕರಾಳ ದಿನಾಚರಣೆಗೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಿದ ಬೆಳಗಾವಿ ಪೊಲೀಸ್ ಕಮಿಷನರ್ ಬೋರಸೆ ಭೂಷಣ ಗುಲಾಬ್ರಾವ ಅವರು, ಸಮಿತಿಯವರು ಶುಕ್ರವಾರ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ತಿಳಿಸಿದ್ದರು. ಆದರೆ ಶನಿವಾರ ಕರಾಳ ದಿನಾಚರಣೆ ಆಚರಿಸಿರುವುದು ಕಾನೂನುಬಾಹಿರವಾಗಿದೆ. ಈ ಬಗ್ಗೆ ಸಂಘಟನೆ ಮೇಲೆ 5 ಲಕ್ಷ ತಂಡ ಹೇರಲಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ
ಮಹಾರಾಷ್ಟ್ರ ಸಂಸದನ ಮರುಕಳಿಸಿದ ನಾಟಕ:
‘ಕಪ್ಪುದಿನ’ ಆಚರಣೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸುತ್ತಿದ್ದ ಕೊಲ್ಲಾಪುರ ಸಂಸದ ಧೈರ್ಯಶೀಲ ಮಾನೆ ಹಾಗೂ ಶಿವಸೇನೆ ಮುಖಂಡ ವಿಜಯ ದೇವಣೆಯವರನ್ನು ಶನಿವಾರ ಮುಂಜಾನೆ ನಿಪ್ಪಾಣಿ ತಾಲೂಕಿನ ಕೋಗನೊಳಿ ಚೆಕ್ ಪೋಸ್ಟ್ ನಲ್ಲಿ ಬೆಳಗಾವಿ ಪೊಲೀಸರು ತಡೆದರು.
ಬೆಳಗಾವಿಯ ಗಡಿ ಪ್ರವೇಶ ಮಾಡುವುದ್ದಾಗಿ ಪುಂಡಾಟ ನಡೆಸಿದ್ದ ಮಹಾರಾಷ್ಟ್ರದ ನಾಯಕರಿಗೆ ಜಿಲ್ಲಾ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಮರಳಿ ಕಳುಹಿಸಿದರು.
ಕೊಲ್ಲಾಪುರದ ಹಾತಕಣಗಲಾ ಸಂಸದ ಧೈರ್ಯಶೀಲ ಮಾನೆ, ಕೊಲ್ಲಾಪುರ ಶಿವಸೇನೆ ಅಧ್ಯಕ್ಷ ವಿಜಯ ದೇವಣೆಯಿಂದ ಇದೇ ಚೆಕ್ ಪೋಸ್ಟನಿಂದ ಬೆಳಗಾವಿ ಜಿಲ್ಲೆ ಪ್ರವೇಶಿಸುವ ಘಟನೆ ಈ ಹಿಂದೆ ಅನೇಕ ಬಾರಿ ನಡೆದಿದೆ. ಕೊಲ್ಹಾಪುರದಿಂದ ಬೆಂಬಲಿಗರೊಂದಿಗೆ ಕಾರಿನಲ್ಲಿ ಆಗಮಿಸಿದ ಸಂಸದ ಮಾನೆ, ದೇವಣೆ, ಕೋಗನೊಳ್ಳಿ ಚೆಕ್ ಪೋಸ್ಟನಲ್ಲಿ ಇಳಿದು ಕರ್ನಾಟಕದ ವಿರುದ್ಧ ಮತ್ತು ಮಹಾರಾಷ್ಟ್ರದ ಪರ ಘೋಷಣೆ ಕೂಗುತ್ತಾರೆ, ನಂತರ ಮರಳಿ ತೆರಳುತ್ತಾರೆ. ಪ್ರವೇಶ ನಿಷಿದ್ಧ ಎಂದು ಗೊತ್ತಿದ್ದರೂ ಅವರ ಈ ಡ್ರಾಮಾ ಸಾಮಾನ್ಯ.

ಗಡಿ ಪಾರಾದವನೊಂದಿಗೆ ಇನ್ಸಪೆಕ್ಟರ್ ಸೆಲ್ಫಿ!
ವಿಪರ್ಯಾಸ ವಿಷಯವೆಂದರೆ ಕರ್ನಾಟಕವನ್ನೂ, ಪೊಲೀಸರನ್ನೂ ಅಪಹಾಸ್ಯವಾಗಿ ಸದಾ ಟೀಕಿಸಿ ನಿಂದಿಸುತ್ತಿದ್ದ ಮತ್ತು ಕಪ್ಪು ದಿನ ಆಚರಣೆಗೆ ಕಪ್ಪು ಉಡುಗೆಯಲ್ಲಿ ಬಂದಿದ್ದ ಎಂಇಎಸ್ ಮುಖಂಡ ಶುಭಂ ಶೇಳಕೆಯೊಂದಿಗೆ ಪೊಲೀಸ್ ಅಧಿಕಾರಿ ಕಾಲಿಮಿರ್ಚಿ ಮೊಬೈಲನಲ್ಲಿ ಸೆಲ್ಫಿ ತೆಗೆದುಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಒಳಗಾಗಿ ಪೊಲೀಸ್ ಇಲಾಖೆಯ ಮುಜುಗರಕ್ಕೆ ಕಾರಣವಾಗಿದೆ.
ಇದೇ ಶೇಳಕೆಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಮಾಳಮಾರುತಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಕಾಲಿಮಿರ್ಚಿ ಅವರು ಗೃಹ ಇಲಾಖೆಗೆ ವರದಿ ಕೊಟ್ಟಿದ್ದರು. ಇಂದು ಅವರೇ ಪುಂಡನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವಿಡಿಯೋ ವೈರಲ್ ಆಗಿ ಕನ್ನಡಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

