ಉತ್ತರ ಗೋವಾ ಕ್ಲಬ್‌ ನಲ್ಲಿ ಅಗ್ನಿ ದುರಂತ : 25 ಮಂದಿ ಸಜೀವ ದಹನ, 50 ಜನರಿಗೆ ಗಾಯ

A B Dharwadkar
ಉತ್ತರ ಗೋವಾ ಕ್ಲಬ್‌ ನಲ್ಲಿ ಅಗ್ನಿ ದುರಂತ : 25 ಮಂದಿ ಸಜೀವ ದಹನ, 50 ಜನರಿಗೆ ಗಾಯ

ಆರ್ಪೋರಾ, ಡಿಸೆಂಬರ್ 7: ಉತ್ತರ ಗೋವಾದ ಆರ್ಪೋರಾದಲ್ಲಿ ನಿನ್ನೆ ರಾತ್ರಿ ಪ್ರಸಿದ್ಧ ಬರ್ಚ್ ಬೈ ರೋಮಿಯೋ ಲೇನ್ ನೈಟ್‌ ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪ್ರವಾಸಿಗರು ಸೇರಿದಂತೆ 25 ಮಂದಿ ಸಾವನ್ನಪ್ಪಿದ ದಾರುಣ ದುರಂತ ನಡೆದಿದೆ. ಇನ್ನೂ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗೋವಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಧಿಕಾರಿಗಳ ಪ್ರಾಥಮಿಕ ಮಾಹಿತಿ ಪ್ರಕಾರ, ಹೆಚ್ಚು ಮಂದಿ ಹೊಗೆ ಉಸಿರಾಟದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಪ್ರವಾಸಿಗರು, 14 ಮಂದಿ ಸಿಬ್ಬಂದಿ ಎಂದು ಗುರುತುಪಟ್ಟಿದ್ದು, ಉಳಿದ ಏಳು ಮಂದಿಯ ವಿವರಗಳನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.

ಅಗ್ನಿ ಅವಘಡವು ರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದ್ದು, ಮೊದಲಿಗೆ ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟವಾದ ಶಂಕೆ ವ್ಯಕ್ತವಾಗಿದ್ದರೂ, ಪರಿಶೀಲನೆ ವೇಳೆ ಸಿಲಿಂಡರ್‌ಗಳು ಅಚ್ಚುಕಟ್ಟಾಗಿ ಇರುವುದರಿಂದ ಆ ಅನುಮಾನ ತಳ್ಳಿಹಾಕಲಾಗಿದೆ. ಆದರೆ ಸ್ಫೋಟದ ಶಬ್ದ ತೀವ್ರವಾಗಿದ್ದು, ಬೆಂಕಿ ಕ್ಷಣಾರ್ಧದಲ್ಲೇ ಕಟ್ಟಡದ ಮೇಲೀನ ಭಾಗವನ್ನೇ ಆವರಿಸಿಕೊಂಡಿತೆಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ರಾತ್ರಿ ಪೂರ್ತಿ ಮುಂದುವರಿದಿತ್ತು, ಮೃತದೇಹಗಳನ್ನು ಮರಣೋತ್ತರ ಪರಿಶೀಲನೆಗೆ ಕಳುಹಿಸಲಾಗಿದೆ. ಗಾಯಾಳುಗಳ ಸ್ಥಿತಿ ಕುರಿತು ಅಧಿಕೃತ ವಿವರಗಳು ಇನ್ನೂ ಬರಬೇಕಿದೆ.

ಘಟನೆ ಬಳಿಕ ಕ್ಲಬ್‌ನ್ನು ಸೀಜ್ ಮಾಡಲಾಗಿದ್ದು, ಮಾಲೀಕರು ಹಾಗೂ ನಿರ್ವಾಹಕರನ್ನು ವಿಚಾರಣೆ ಆರಂಭಿಸಲಾಗಿದೆ. ಪ್ರಾಥಮಿಕವಾಗಿ, ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕಾರ್ಯಾಚರಣೆ ನಡೆಸಿದ ಅನುಮಾನ ವ್ಯಕ್ತವಾಗಿದೆ. ಎರಡು ಗಂಟೆಗಳ ಹೋರಾಟದ ಬಳಿಕ ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ.

ಗೋವಾ ಮುಖ್ಯಮಂತ್ರಿ ಡಾ. ಪ್ರಮೊದ ಸಾವಂತ ಅವರು ಸ್ಥಳಕ್ಕೆ ಭೇಟಿ ನೀಡಿ ದಿನವನ್ನು ಅತ್ಯಂತ ನೋವಿನ ದಿನ ಎಂದು ಹೇಳಿದರು. ಅವರು ಅಗ್ನಿ ಸುರಕ್ಷತಾ ನಿಯಮಗಳ ಪಾಲನೆ, ಕಟ್ಟಡದ ನಿಯಮಾವಳಿ, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸುವ ಸಮಗ್ರ ತನಿಖೆ ಆದೇಶಿಸಿದ್ದಾರೆ.

ಬಿಜೆಪಿ ಶಾಸಕ ಮೈಕೆಲ್ ಲೋಬೋ ಅವರು ಮೃತರಲ್ಲಿ ಹೆಚ್ಚಿನವರು ರೆಸ್ಟೋರೆಂಟನ ನೆಲಮಾಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರೇ ಎಂದು ಹೇಳಿದ್ದು ಹಲವಾರು ಮಂದಿ ನೆಲಮಾಳಿಗೆ ಕಡೆ ಓಡಿದಾಗ ಹೊಗೆಯಿಂದ ಅಸುನೀಗಿರುವುದು ಸ್ಪಷ್ಟವಾಗಿದೆ ಎಂದರು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಸೇರಿದಂತೆ ಅನೇಕ ಗಣ್ಯರು ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಪ್ರಧಾನಮಂತ್ರಿಗಳು ಪೀಡಿತ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಗಳಿಗೆ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ ನೀಡಲಾಗುವುದಾಗಿದೆ.

ಆರ್ಪೋರಾ ದುರಂತ ಹಲವು ಪ್ರಾಣಗಳನ್ನು ಕಸಿದುಕೊಂಡಿದ್ದು, ಪ್ರವಾಸಿಗರ ರಜೆಗೆ ಪ್ರಸಿದ್ಧವಾಗಿದ್ದ ಕಲಂಗೂಟ, ಬಾಗಾ ಬೀಚ್‌ ಸಮೀಪದ ಪ್ರದೇಶವೇ ಈಗ ದುಃಖದ ನೆಲೆಯಾಗಿದೆ. ರಕ್ಷಣೆಯಲ್ಲಿ ತೊಡಗಿದ್ದ ಸಿಬ್ಬಂದಿಯೂ ಮನಕಲುಕುವ ದೃಶ್ಯಗಳನ್ನು ಕಂಡು ನಡುಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.