ಬೆಳಗಾವಿ, ೨೧: 1924ರ ಬೆಳಗಾವಿ ಅಧಿವೇಶನದಲ್ಲಿ ಮಹಾತ್ಮಾಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಕುರಿತು ಪ್ರತಿಪಾದನೆ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಬೆಳಗಾವಿಯ ಸುವರ್ಣಸೌಧದಲ್ಲಿ ಮಹಾತ್ಮಾ ಗಾಂಧೀಜಿಯವರ ಪುತ್ಥಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಗಾಂಧೀಜಿಯವರು 1924 ರಲ್ಲಿ ಕಾಂಗ್ರೆಸ್ ನ ಐತಿಹಾಸಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ನಡೆದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಗಾಂಧೀಜಿಯವರು ಸದಾ ಶ್ರೀರಾಮನ ಸ್ಮರಣೆ ಮಾಡುತ್ತಿದ್ದರು. ಅವರು ಅಪ್ಪಟ ಹಿಂದೂ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಬಿಜೆಪಿಯವರು ಬಿಂಬಿಸಿರುವಂತೆ ಗಾಂಧೀಜಿ ಹಿಂದೂ ವಿರೋಧಿ ಆಗಿರಲಿಲ್ಲ. ಅದು ನೂರಕ್ಕೆ ನೂರರಷ್ಟು ಸುಳ್ಳು. ಬಿಜೆಪಿ ಕುಟುಂಬದ ನಾಥೂರಾಮ ಗೋಡ್ಸೆ ಗಾಂಧಿ ಹತ್ಯೆ ಮಾಡಿದಾಗ, ‘ಹೇ ರಾಮ್’ ಎನ್ನುತ್ತ ಜೀವಬಿಟ್ಟರು. ಆದರೆ, ಅವರು ಸಮಾಜ ಸುಧಾರಣೆ ಬಯಸಿದ್ದರು. ಹಿಂದೂ–ಮುಸ್ಲಿಮರು ಸಹೋದರರಂತೆ ಬದುಕಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.
ಇಂದು ಸಮಾಜದಲ್ಲಿ ಒಡಕು ಮೂಡಿಸಿ, ಜಾತಿ–ಜಾತಿಗಳ ಮಧ್ಯೆ ಬಿಜೆಪಿಯವರು ಸಂಘರ್ಷ ಉಂಟು ಮಾಡುತ್ತಿದ್ದಾರೆ. ಅವರು ಮನುವಾದಿಗಳು. ಕಾಂಗ್ರೆಸ್‌ನವರು ಸಂವಿಧಾನದ ಪರವಾಗಿ ಇರುವವರು. ಬಿಜೆಪಿಯವರು ನಮ್ಮ ವಿರೋಧಿಗಳು. ಸಂವಿಧಾನವನ್ನು ದುರ್ಬಲಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಲೇ ಇದ್ದಾರೆ. ಅದಕ್ಕೆ ಎಂದಿಗೂ ಆಸ್ಪದ ಕೊಡಬೇಡಿ ಎಂದು ತಿಳಿಸಿದರು.
ಬಾಬಾಸಾಹೇಬ ಅಂಬೇಡ್ಕರ ಅವರು ಕೂಡ ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಇಂದು ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಅದಕ್ಕೆ ನಾವು ಆಸ್ಪದ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಇಂದಿನ ಯುವಜನತೆಗೆ ಹಾಗೂ ಮುಂದಿನ ಪೀಳಿಗೆಗೆ ಗಾಂಧೀಜಿಯವರ ವಿಚಾರಧಾರೆಯನ್ನು ತಲುಪಿಸುವ ಉದ್ಧೇಶದಿಂದ ಪುತ್ಥಳಿಯನ್ನು ಸ್ಥಾಪಿಸಲಾಗಿದೆ ಎಂದೂ ಮುಖ್ಯಮಂತ್ರಿ ನುಡಿದರು.