ಗೋಕಾಕ, 20 : ಚಿಕ್ಕೋಡಿ, ಅಥಣಿ, ಸಂಕೇಶ್ವರ ಮತ್ತು ಮೂಡಲಗಿ ಭಾಗಗಳಿಂದ ಗೋಕಾಕಕ್ಕೆ ಸಂಪರ್ಕ ಕಲ್ಪಿಸುವ ಜತ್ತ-ಜಾಂಬೋಟಿ ರಾಜ್ಯ ಹೆದಾರಿಯಲ್ಲಿರುವ ಲೋಳಸೂರ ಸೇತುವೆ ಬುಧವಾರ ಮುಳುಗಡೆ ಆಗಿದೆ.
ಬೆಳಗಾವಿ ನಂತರ ಜಿಲ್ಲೆಯ ಅತೀ ದೊಡ್ಡ ನಗರವಾದ ಗೋಕಾಕ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ 70ರ ದಶಕದ ಲೋಳಸೂರ ಸೇತುವೆಯು ಹೆಚ್ಚು ಮಳೆಯಾದಾಗ ಮುಳುಗಡೆಯಾಗಿ ಜನಜೀವನ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಈಗಾಗಲೇ 5 ದಶಕ ಕಂಡಿರುವ ಈ ಸೇತುವೆ ಬದಲು ಇನ್ನೊಂದು ಎತ್ತರದ ಸೇತುವೆ ನಿರ್ಮಾಣ ಆಗಬೇಕೆಂಬ ಜನರ ಬೇಡಿಕೆಯು ದಶಕಗಳಿಂದ ನೆನಗುದಿಗೆ ಬಿದ್ದಿದೆ.
40 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಹೊಸ ಸೇತುವೆ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ ಎನ್ನಲಾಗಿದೆ. ಆದರೆ ಇದರ ಕಾರ್ಯಾರಂಭ ಮತ್ತು ಮುಕ್ತಾಯಗೊಳ್ಳಲು ಈ ಭಾಗದ ಜನ ಇನ್ನೂ ಅದೆಷ್ಟೋ ವರ್ಷ ಕಾಯಬೇಕೋ ಗೊತ್ತಿಲ್ಲ!.

