ಬೆಳಗಾವಿ : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದೊಡ್ಡ ಮೊತ್ತದ ದಂಡ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಹುಕ್ಕೇರಿ ತಾಲೂಕು ನೇರ್ಲಿ ಗ್ರಾಮದ ಕಲ್ಲಗೌಡ ಪಾಟೀಲ (30) ಶಿಕ್ಷೆಗೊಳಗಾದ ಆರೋಪಿ. 2023 ರ ನವೆಂಬರ್ 6 ರಂದು ಆರೋಪಿ ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ವಿಡಿಯೋ ಕಾಲ್ ಮೂಲಕ ಬಟ್ಟೆ ಬಿಚ್ಚಿಸಿ ಅಂಗಾಂಗ ತೋರಿಸುವಂತೆ ಒತ್ತಾಯಿಸಿರುವ ಆತ, ಒಂದು ವೇಳೆ ನಿರಾಕರಣೆ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಂತರ ಬಾಲಕಿಯಿಂದ ಅಶ್ಲೀಲ ದೃಶ್ಯ ಪಡೆದು ತನ್ನ ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ಸಂಗ್ರಹಿಸಿದ್ದಾನೆ. ಗೋಕಾಕ ಉಪ ವಿಭಾಗದ ಡಿಎಸ್ಪಿ ಡಿ.ಎಚ್. ಮುಲ್ಲಾ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಆರೋಪಿಗೆ ವಿವಿಧ ಕಲಂಗಳ ಅಡಿಯಲ್ಲಿ ಕಠಿಣ ಶಿಕ್ಷೆ ಮತ್ತು ಮೂರು ಲಕ್ಷದ ಮೂವತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಒಂದು ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಎಲ್.ವಿ.ಪಾಟೀಲ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.



