ಹುಕ್ಕೇರಿ, ೧೮: ತಾಲ್ಲೂಕಿನ ಹಿಡಕಲ್ ಜಲಾಶಯ ಸಂಪೂರ್ಣ ತುಂಬುವ ಹಂತ ತಲುಪಿದ್ದು ಜಿಲ್ಲಾಡಳಿತವು ಘಟಪ್ರಭಾ ನದಿ ದಂಡೆಯಲ್ಲಿರುವ ಪ್ರದೇಶಗಳಿಗೆ ಸಂಭವನೀಯ ಪ್ರವಾಹದ ಎಚ್ಚರಿಕೆ ಘೋಷಿಸಿದೆ
ನದಿ ತೀರದಲ್ಲಿ ವಾಸಿಸುವ ಜನರು ಜಾಗೃತರಾಗಿರಬೇಕು, ಅಗತ್ಯವಿದ್ದರೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಹಾಗೂ ಯಾವುದೇ ಕಾರಣಕ್ಕೂ ಜಲಾಶಯ ಹಾಗೂ ನೀರು ಸಂಗ್ರಹಣಾ ಪ್ರದೇಶಗಳ ಬಳಿ ಹೋಗಬಾರದು ಎಂದು ಸೂಚಿಸಲಾಗಿದೆ.
ಜಲಾಶಯದ ನೀರಿನ ಮಟ್ಟ ನಿಯಂತ್ರಣಕ್ಕಾಗಿ, ನೀರಾವರಿ ಇಲಾಖೆ ಸೋಮವಾರ 6,000 ಕ್ಯೂಸೆಕ್ ನೀರನ್ನು ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ಬಿಟ್ಟಿದೆ, ಮುಂದಿನ ದಿನಗಳಲ್ಲಿ ಈ ಪ್ರಮಾಣ 20,000 ಕ್ಯೂಸೆಕ್ ವರೆಗೆ ಏರಬಹುದು ಎಂದು ಇಲಾಖೆ ಎಚ್ಚರಿಸಿದೆ.
ರವಿವಾರ ಸಂಜೆ 5 ಗಂಟೆಗೆ ಜಲಾಶಯದ ನೀರಿನ ಮಟ್ಟ 2174.667 ಅಡಿಯಷ್ಟಿದ್ದು ಅದರ ಗರಿಷ್ಠ ಸಾಮರ್ಥ್ಯದ 2175 ಅಡಿಯ ಹೋಲಿಕೆಯಲ್ಲಿ 99.98% ತುಂಬಿದೆ. ಅಗಸ್ಟ ಎರಡನೇ ಹಾಗೂ ಮೂರನೇ ವಾರಗಳಲ್ಲಿ ಜಲಾಶಯದ ಪ್ರದೇಶ ಹಾಗೂ ನದಿಗಳ ಹರಿವಿನ ವ್ಯಾಪ್ತಿಯಲ್ಲಿ ಒಳ್ಳೆಯ ಮಳೆಯಾದ್ದರಿಂದ 55 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯ ಬೇಗನೆ ತುಂಬಿಕೊಂಡಿದೆ. ಇದು ಬೆಳಗಾವಿ ನಗರದ ಮುಖ್ಯ ನೀರಿನ ಮೂಲವಾಗಿದೆ.
ಸಾಧ್ಯವಿರುವ ಪ್ರವಾಹವನ್ನು ಎದುರಿಸಲು, ಜಿಲ್ಲಾಡಳಿತವು ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಆಹಾರ, ಔಷಧಿ ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಗೋಕಾಕ ತಾಲ್ಲೂಕಿನ ಪ್ರಸಿದ್ಧ “ಭಾರತದ ನಯಾಗ್ರಾ” ಎಂದು ಕರೆಯಲ್ಪಡುವ ಗೋಕಾಕ ಜಲಪಾತ ಮತ್ತಷ್ಟು ಆಕರ್ಷಕವಾಗಿ ಧುಮ್ಮುಕ್ಕುತ್ತಿದೆ.
ಸತತ ಮಳೆಯಿಂದಾಗಿ ಸೋಮವಾರ ಬೆಳಗಾವಿ, ಖಾನಾಪುರ, ಕಿತ್ತೂರು, ಸವದತ್ತಿ ಮತ್ತು ಬೈಲಹೊಂಗಲ ತಾಲ್ಲೂಕುಗಳಲ್ಲಿ 2ನೇ ಪಿಯುಸಿ ವರೆಗಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

