ವಿಚ್ಚೇದಿತ ಪೊಲೀಸ್ ಪತಿಯಿಂದಲೇ ಪತ್ನಿಯ ಭೀಕರ ಕೊಲೆ

A B Dharwadkar
ವಿಚ್ಚೇದಿತ ಪೊಲೀಸ್ ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಬೆಳಗಾವಿ: 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ನಂತರ ವಿಚ್ಛೇದನ ಪಡೆದು ಕಿರುಕುಳ ನೀಡುತ್ತಿದ್ದ ಮಾಜಿ ಪತಿಯಿಂದ ಮಹಿಳೆ ಹತ್ಯೆಯಾದ ಘಟನೆ ನಡೆದಿದೆ.

ಸವದತ್ತಿಯ ರಾಮಪುರಸೈಟಿನಲ್ಲಿ ಘಟನೆ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಕೊಲೆಯಾಗಿದ್ದ ಬಸ್ ನಿರ್ವಾಹಕಿ ಕಾಶವ್ವ ತನ್ನ ಮಾಜಿ ಪತಿಯಿಂದಲೇ ಕೊಲೆಯಾಗಿದ್ದಾಳೆ. ಪೊಲೀಸ್ ಆಗಿರುವ ಆಕೆಯ ವಿಚ್ಛೇದಿತ ಪತಿ ಆಕೆಯನ್ನು ಭೀಕರವಾಗಿ ಕೊಲೆಗೈದಿದ್ದಾನೆ.

ಪ್ರೀತಿಸಿ ಮದುವೆಯಾಗಿದ್ದ ಈತ ಪದೇ ಪದೇ ಆಕೆಯ ಮೇಲೆ ಸಂಶಯ ಪಟ್ಟು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಆಕೆ ತವರು ಸವದತ್ತಿಗೆ ವರ್ಗಾವಣೆ ಮಾಡಿಕೊಂಡಿದ್ದಳು. ವಿವಾಹ ವಿಚ್ಛೇದನಕ್ಕೆ ಬೈಲಹೊಂಗಲ ನ್ಯಾಯಾಲಯದಿಂದ 2025 ರ ಏಪ್ರಿಲ್ 5 ರಂದು ವಿವಾಹ ವಿಚ್ಛೇದನವನ್ನು ಆಕೆ ಪಡೆದುಕೊಂಡಿದ್ದಳು.

ಸಂತೋಷ ಅಕ್ಟೋಬರ್ 13 ರಂದು ರಾತ್ರಿ 8 ಗಂಟೆಗೆ ಕಾಶವ್ವನ ಬಳಿ ಹೋಗಿ ಗಲಾಟೆ ಮಾಡಿ ಆಕೆಯ ಕತ್ತು ಕೊಯ್ದು ಕೊಲೆಗೈದಿದ್ದಾನೆ. ನಂತರ ಅಲ್ಲಿಂದ ಪರದಿಯಾಗಿದ್ದಾನೆ. ಆಕೆ ಕೊಲೆಯಾದ ಸ್ಥಳದಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸಂತೋಷನ ಪತ್ತೆಗೆ ಶೋಧ ನಡೆಸಿದ್ದಾರೆ.

 

ಘಟನೆ ವಿವರ:

ಸವದತ್ತಿಯ ರಾಮಪುರ ಸೈಟ್ ಹೂಲಿ ಅಜ್ಜನ ಮಠದ ಹತ್ತಿರ ನಡೆದಿರುವ ಘಟನೆ ಇದು.

ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕಿಯಾಗಿ ಕರ್ತವ್ಯದಲ್ಲಿದ್ದ ಕಾಶವ್ವ ಕರೀಕಟ್ಟಿ (34) ಕೊಲೆಯಾದವಳು. ನಿಪ್ಪಾಣಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸಂತೋಷ ಕಾಂಬಳೆ (35) ಕೊಲೆ ಮಾಡಿದವ ಎಂದು ಪೊಲೀಸರು ತಿಳಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶವ್ವ ಹಾಗೂ ನಿಪ್ಪಾಣಿಯ ಕಾನ್‌ಸ್ಟೆಬಲ್‌ ಸಂತೋಷ ಕಾಂಬಳೆ ಇಬ್ಬರು ಪ್ರೀತಿಸಿ 2013ರಲ್ಲಿ ವಿವಾಹವಾಗಿದ್ದರು.11 ವರ್ಷದ ಪುತ್ರ ಇದ್ದಾನೆ.

ನಿಪ್ಪಾಣಿಯಲ್ಲಿ ಪತಿ, ಪತ್ನಿಯರ ಮಧ್ಯೆ ಕಲಹ ನಡೆದಿತ್ತು. ಇದರಿಂದ ಬೇಸತ್ತ ಪತ್ನಿ ಕಾಶವ್ವ ಸವದತ್ತಿ ಡಿಪೊಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಸವದತ್ತಿಗೂ ಬಂದ ಸಂತೋಷ ಪತ್ನಿಯನ್ನು ಸತಾಯಿಸುತ್ತಿದ್ದ. ಈ ಕುರಿತು ಪತ್ನಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಬಳಿಕ ಸಂತೋಷನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿತ್ತು.

ಜೊತೆಗೆ ಪತ್ನಿ ಇತ್ತೀಚಿಗೆ ಪತಿಯಿಂದ ವಿವಾಹ ವಿಚ್ಛೇದನ ಪಡೆದಿದ್ದಳು. ಆದರೂ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಅ. 13 ರಂದು ಪತ್ನಿ ಮನೆಗೆ ಬಂದು ಜಗಳವಾಡಿದ ಸಂತೋಷ, ಮಾರಕಾಸ್ತ್ರದಿಂದ ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಈ ವಿಷಯ ಬಹಿರಂಗವಾಗದಿರಲೆಂದು ಮನೆಗೆ ಬೀಗ ಹಾಕಿ ಹೋಗಿದ್ದ.

ಸೇವೆಗೆ ಬಾರದ ಕಾಶವ್ವ ಅವರನ್ನು ಕಾಣಲು ಸಹೋದ್ಯೋಗಿಗಳು ಹಾಗೂ ಸಂಬಂಧಿಕರು ಗುರುವಾರ ಬಂದಾಗ ಮನೆಯಿಂದ ದುರ್ನಾತ ಬಂದಿದೆ. ಅಗ ಇಡೀ ಘಟನೆ ಬೆಳಕಿಗೆ ಬಂದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.