ಹಾವೇರಿ: ನಗರದಲ್ಲಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡುವ ಸಂದರ್ಭದಲ್ಲಿ ಶಿಶುವಿನ ತಲೆಗೆ ಕತ್ತರಿ ತಾಗಿ ಗಾಯವಾಗಿದ್ದಕ್ಕೆ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಮೊಹಮ್ಮದ್ ಮುಜಾಹಿದ್ ಎಂಬುವವರ ಪತ್ನಿ ಬೇಬಿ ಅಸ್ಸಾ ಅವರಿಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ಬಂದಿದ್ದರು. ಶುಕ್ರವಾರ ಸೀಸೇರಿಯನ್ ಮಾಡುವುದಾಗಿ ಹೇಳಿದ್ದ ಡಾ.ಸ್ವಾತಿ ಹಾಗೂ ತಂಡದವರು, ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದೊಯ್ದಿದ್ದರು.
ಸಿಸೇರಿಯನ್ ಮುಗಿಯುತ್ತಿದ್ದಂತೆ ಶಿಶುವಿನ ಬಗ್ಗೆ ಪೋಷಕರಿಗೆ ಮಾಹಿತಿ ತಿಳಿಸಿದ್ದ ವೈದ್ಯರು, ಸಿಸೇರಿಯನ್ ಮಾಡುವ ಸಂದರ್ಭದಲ್ಲಿ ಹೊಟ್ಟೆಯಲ್ಲಿದ್ದ ಮಗುವನ್ನು ಹೊರಗೆ ತೆಗೆಯಲು ಸಾಕಷ್ಟು ಕಷ್ಟವಾಯಿತು. ಇದೇ ಸಂದರ್ಭದಲ್ಲಿ ತಲೆಗೆ ಕತ್ತರಿ ತಾಗಿದೆ. ಎರಡು ಹೊಲಿಗೆ ಹಾಕಿದ್ದೇವೆ ಎಂದಿದ್ದರು. ವೈದ್ಯರ ಮಾತು ಕೇಳಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ತಲೆಗೆ ಹೊಲಿಗೆ ಹಾಕಿದ ಸ್ಥಿತಿಯಲ್ಲಿಯೇ ಶಿಶುವನ್ನು ಶಸ್ತ್ರಚಿಕಿತ್ಸೆ ಕೊಠಡಿಯಿಂದ ಹೊರಗೆ ತಂದ ವೈದ್ಯರು, ಪೋಷಕರಿಗೆ ನೀಡಿದರು. ಶಿಶುವನ್ನು ನೋಡಿ ಪೋಷಕರು ಕಣ್ಣೀರಿಟ್ಟರು.
ಆಸ್ಪತ್ರೆಯಲ್ಲಿ ನಿತ್ಯವೂ ಹೇರಿಗೆ ಆಗುತ್ತವೆ. ಆದರೆ, ನಮ್ಮ ಮಗುವಿನ ವಿಷಯದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.



