ಹಾವೇರಿ: ರಾಜ್ಯದ ೨.೨೦ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ನಮ್ಮ ಸರ್ಕಾರ ೧೦೦೦ ದಿನಗಳ ಯಶಸ್ವಿ ಆಡಳಿತ ನಡೆಸಿದ್ದೇವೆ ಹಾಗೂ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹೇಳಿದರು.
ನಗರದ ಹೊರವಲಯದ ಶನಿವಾರ ಕಂದಾಯ ಇಲಾಖೆ ಹಾಗೂ ಹಾವೇರಿ ಜಿಲ್ಲಾಡಳಿತ ಸಹಯೋಗದಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ, ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಒಂದು ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಸಚಿವ ಕೃಷ್ಣಬೈರೇಗೌಡರು ಕಂದಾಯ ಇಲಾಖೆಯಲ್ಲಿ ಪ್ರಗತಿ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಬದುಕುತ್ತಿರುವರಿಗೆ ದಾಖಲೆ ನೀಡುವ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಬಾಕಿ ಉಳಿದ ಫಲಾನುಭವಿಗಳಿಗೆ ಬರುವ ದಿನಗಳಲ್ಲಿ ಹಕ್ಕುಪತ್ರ ನೀಡಲಾಗುವುದು ಎಂದು ಹೇಳಿದರು.
೨೪೩ ಭರವಸೆ ಈಡೇರಿಕೆ: ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ೫೯೦ ಭರವಸೆಗಳ ಪೈಕಿ ೨೪೩ ಭರವಸೆಗಳನ್ನು ಈಡೇರಿಸಲಾಗಿದೆ. ಬಾಕಿ ಭರವಸೆಗಳನ್ನು ಇಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ೨೦೧೩ರಿಂದ ೨೦೧೮ರ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ೧೬೯ ಭರವಸೆಗಳ ಪೈಕಿ೧೫೮ ಭರವಸೆಗಳನ್ನು ಈಡೇರಿಸಲಾಗಿದೆ ಹಾಗೂ ಪ್ರಣಾಳಿಕೆಯಲ್ಲಿ ಹೇಳದ ೩೦ ಭರವಸೆಗಳನ್ನು ಇಡೇರಿಸಲಾಗಿದೆ ಎಂದು ಹೇಳಿದರು.
ಜಿಡಿಪಿಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ: ಬಿಜೆಪಿ ಸರ್ಕಾರ ನಾಲ್ಕು ವರ್ಷದ ಅವಧಿಯಲ್ಲಿ ಶೇ.೧೦ರಷ್ಟು ಭರವಸೆ ಇಡೇರಿಸಿಲ್ಲ. ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿಲ್ಲ, ಖಜಾನೆ ಖಾಲಿಯಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗೆ ರೂ. ಒಂದು ಲಕ್ಷ ೧೮ ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ತೆರಿಗೆ ಸಂಗ್ರಹ ಹೆಚ್ಚಿಗೆ ಮಾಡಿದ್ದೇವೆ. ಜಿಡಿಪಿಯಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇಂದ್ರಕ್ಕೆ ನಾಲ್ಕುವರೆ ಲಕ್ಷ ಕೋಟಿ ತೆರಿಗೆ ಹಣ ನೀಡಲಾಗುತ್ತಿದೆ. ಆದರೆ ಕೇಂದ್ರ ಮಾತ್ರ ನಮಗೆ ಅನ್ಯಾಯ ಮಾಡುತ್ತಿದೆ .ನೀರಾವರಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ, ಜೆ.ಜೆಎಂ. ಯೋಜನೆಗೆ ೧೫ಸಾವಿರ ಕೋಟಿ ನೀಡಬೇಕು ಅದನ್ನು ನೀಡಿಲ್ಲ ಎಂದರು.
ಎಲ್ಲ ಜಾತಿ, ಧರ್ಮ ಭಾಷೆಯ ಜನರಿಗೆ ಸೇರಿದಂತಹ ಎಲ್ಲರನ್ನೊಳಗೊಂಡ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ನಂಬಿಕೆಯಿರಿಸಿದೆ. ನಾವು ಅಸಮಾನತೆ ನಿವಾರಣೆ ಕಾರ್ಯಮಾಡುತ್ತಿದ್ದೇವೆ. ನಮ್ಮ ಸರ್ಕಾರ ಒಂದು ಸಾವಿರ ದಿನ ಯಶಸ್ವಿಯಾಗಿ ಪೂರೈಸಿ ದೆ. ನುಡಿದಂತೆ ನಡೆದುಕೊಳ್ಳುವುದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಹೇಳಿದರು.
ಆಯವ್ಯಯದಲ್ಲಿ ಜಿಲ್ಲೆಗೆ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿ ಬೇಡಿಕೆ ಇದೆ, ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳ ಕುರಿತು ಅಮಾರ್ತ್ಯಸೇನ್, ಅಭಿಜಿತ್ ಬ್ಯಾನರ್ಜಿ ಮುಂತಾದ ಆರ್ಥಿಕ ತಜ್ಞರ ಜೊತೆಗೆ ದಿನ ಪತ್ರಿಕೆಗಳು ಮತ್ತು ವಿಶ್ವ ವಿದ್ಯಾಲಯಗಳ ಅಧ್ಯಯನಗಳು ವ್ಯಕ್ತಪಡಿಸಿದ್ದ ಸದಾಭಿಪ್ರಾಯಗಳನ್ನು ಮುಖ್ಯಮಂತ್ರಿಗಳು ಓದಿದರು.
ರೈತರ ಬದುಕು ಹಸನು: ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಹಕ್ಕುಪತ್ರ ವಿತರಣೆ ಮಾತನಾಡಿ, ೨.೨೦ ಲಕ್ಷ ಕುಟುಂಬಗಳಿಗೆ ದಾಖಲೆ ಹಕ್ಕುಪತ್ರ ನೀಡುವ ಮೂಲಕ ಅವರಿಗೆ ಆರ್ಥಿಕ ಭದ್ರತೆ ನೀಡಿದ ಏಕೈಕ ಸರ್ಕಾರ ಕಾಂಗ್ರೆಸ್ ಸರ್ಕಾರ. ಸುಮಾರು ವರ್ಷಗಳಿಂದ ದಾಖಲೆ ರಹಿತವಾಗಿ ವಾಸಿಸುವರಿಗೆ ಭೂ ಗ್ಯಾರಂಟಿ ಯೋಜನೆ ಮೂಲಕ ಹಕ್ಕುಪತ್ರ ನೀಡಲಾಗುತ್ತಿದೆ. ಕೃಷ್ಣ ಮೇಲ್ದಂಡೆ ಯೋಜನೆ ರೈತರಿಗೆ ಪ್ರತಿ ಎಕರೆ ೩೫-೪೦ ಲಕ್ಷ ರೂ. ನೀಡಲು ೭೫ ಸಾವಿರ ಕೋಟಿ ಮಂಜೂರು ಮಾಡಲಾಗಿದೆ. ಕೃಷ್ಣ, ಕಾವೇರಿ ಮಹದಾಯಿ ಜೋಡಣೆ ಮೂಲಕ ರೈತರ ಬದುಕು ಹಸನು ಮಾಡಲಾಗುವುದು. ೭ನೇ ಗ್ಯಾರಂಟಿಯಾಗಿ ಜನತೆ ಕುಡಿಯುವ ನೀರು, ನೀರಾವರಿಗೆ ಹಾಗೂ ಕೆರೆ ತುಂಬಿಸುವ ಯೋಜನೆಗೆ ನಮ್ಮ ಸರ್ಕಾರ ಬದ್ಧವಾಗಿದ ಎಂದು ಹೇಳಿದರು.
ಜಿಲ್ಲೆ ಮುಂಚೂಣಿಯಲ್ಲಿದೆ: ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಅಭಿನಂದನಾ ಪತ್ರಗಳ ವಿತರಣೆ ಮಾಡಿ ಮಾತನಾಡಿ, ಹಾವೇರಿ ಜಿಲ್ಲೆ ಅನೇಕ ವಿಚಾರಗಳಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ ಜಿಲ್ಲೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಅತೀ ಹೆಚ್ಚು ಹಕ್ಕುಪತ್ರಗಳನ್ನು ಹಾನಗಲ್ ತಾಲೂಕಿನಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಭೂ ದಾಖಲೆಗಳ ಹಕ್ಕುಪತ್ರ ನೀಡುವ ಮೂಲಕ ಕಂದಾಯ ಸಚಿವರು ಕಾಗೋಡು ತಿಮ್ಮಪ್ಪ ಕನಸು ನನಸು ಮಾಡಿದ್ದಾರೆ ಎಂದು ಹೇಳಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಅವರು ಸರ್ಕಾರದ ಸಾಧನೆ ಕುರಿತು ಮಾತನಾಡಿದರು.
೫೦ ಸಾವಿರ ಹಕ್ಕುಪತ್ರ ನೀಡುವ ಸಂಕಲ್ಪ: ಶಾಸಕರಾದ ಶ್ರೀನಿವಾಸ ಮಾನೆ ಮಾತನಾಡಿ, ರಾಜ್ಯದಲ್ಲೇ ಹಾನಗಲ್ ತಾಲೂಕಿನಲ್ಲಿ ೭,೭೪೭ ಹಕ್ಕುಪತ್ರಗಳನ್ನು ನೀಡುವ ಮೂಲಕ ರಾಜ್ಯದಲ್ಲೇ ತಾಲೂಕು ಪ್ರಥಮ ಸ್ಥಾನದಲ್ಲಿದೇ. ಐದು ವರ್ಷದ ಅವಧಿಯಲ್ಲಿ ೫೦ ಸಾವಿರ ಹಕ್ಕುಪತ್ರ ನೀಡುವ ಸಂಕಲ್ಪ ಮಾಡಲಾಗಿದೆ ಎಂದರು.
ಕAದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ನೂರಾರು ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೆ, ಗ್ರಾಮದ ಮಾನ್ಯತೆ ಇಲ್ಲದೆ ಬದುಕು ನಡೆಸುತ್ತಿದ್ದ ಕುಟುಂಬಗಳಿಗೆ ನೆಮ್ಮದಿಯ ಬದುಕು ನೀಡಲು ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿ, ಭೂ ಗ್ಯಾರಂಟಿ ಮೂಲಕ ಹಕ್ಕುಪತ್ರ ನೀಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಮುಂದಿನ ತಲೆಮಾರಿಗೆ ಭೂಗ್ಯಾರಂಟಿ ನೀಡಲಾಗಿದೆ. ಇದರ ಶ್ರೇಯಸ್ಸು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರಿಗೆ ಸಲ್ಲುತ್ತದೆ ಎಂದರು.
ಬಡವರಿಗೆ ನೆಮ್ಮದಿ ಸಿಗಬೇಕು: ಇದು ಬಡವರ ಕೆಲಸ, ಬಡವರಿಗೆ ನೆಮ್ಮದಿ ಸಿಗಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ನೋಂದಣಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳು ತಂಡವಾಗಿ ಕೆಲಸ ಮಾಡಿದ್ದಾರೆ. ಇತಿಹಾಸದಲ್ಲಿ ಆಗದ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಹೋಗಿ ದಾಖಲೆ ಸಂಗ್ರಹಿಸಿದ್ದಾರೆ. ಬಡವರ ಪರವಾಗಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ನೆಮ್ಮದಿಯ ಬದುಕಿಗೆ ಭೂ ಗ್ಯಾರಂಟಿ ತರಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು.
ಜನಪರ ಕ್ರಾಂತಿ: ಎರಡುವರೆ ವರ್ಷದಲ್ಲಿ ೨,೪೯೦ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಲಾಗಿದೆ. ಮೃತರಾದ ೧೪.೪೮ ಲಕ್ಷ ಜಮೀನುಗಳ ವಾರಸುದಾರರಿಗೆ ಇ-ಪೋತಿ ಆಂದೋಲನ ಮೂಲಕ ಪೌತಿ ಖಾತೆ ಮಾಡಲಾಗಿದೆ. ೧,೯೬,೯೩೧ ಪೋಡಿ ದುರಸ್ತಿ ಮಾಡಲಾಗಿದೆ, ೧೪.೪೮ ಸರ್ವೇ ನಂಬರ್ ಪೌತಿ ಖಾತೆ ಪೂರ್ಣ ಮಾಡಲಾಗಿದೆ. ಡಿಜಿಟಲೀಕರಣದ ಮೂಲಕ ೬೭ ಕೋಟಿ ದಾಖಲೆಗಳ ಸ್ಕಾö್ಯನಿಂಗ್ ಮಾಡಲಾಗಿದೆ, ಲ್ಯಾಂಡ್ ಬೀಟ್ ಮೂಲಕ ೧೪.೩೦ ಲಕ್ಷ ಸರ್ಕಾರಿ ಆಸ್ತಿ ದಾಖಲೆ ನೋಂದಣಿ ಮಾಡಲಾಗಿದೆ. ಕಾಗದ ರಹಿತ ಆಡಳಿತ ವ್ಯವಸ್ಥೆ ಹಿನ್ನಲೆಯಲ್ಲಿ ಇ-ಕಚೇರಿ ಆನುಷ್ಠಾನ ಮಾಡಲಾಗಿದೆ. ಕಾವೇರಿ ತಂತ್ರಾAಶದ ಅಳವಡಿಕೆ ಮೂಲಕ ಸಂಪೂರ್ಣ ಪಾರದರ್ಶಕ ತರಲಾಗಿದೆ. ಎಲ್ಲ ಕಾರ್ಯಕ್ರಗಳನ್ನು ಸದ್ದಿಲ್ಲದೆ ಮಾಡಲಾಗಿದ್ದು, ಮೌನವಾಗಿ ನಡೆದ ಜನಪರ ಕ್ರಾಂತಿಯಾಗಿದೆ ಎಂದು ಹೇಳಿದರು.
ತಹಶೀಲ್ದಾರ ಕೋರ್ಟ್ನ ಸಾವಿರ ದಿನಗಳ ಬಾಕಿ ಇದ್ದ ೧೦,೭೭೪ ಪ್ರಕರಣಗಳಲ್ಲಿ ಈಗ ೪೯೨ ಬಾಕಿ ಇವೆ, ಡಿ.ಸಿ. ಕೋರ್ಟನ ೭೩,೬೨೪ ಪ್ರಕರಣಗಳಲ್ಲಿ ೧೧,೯೯೦ ಬಾಕಿ ಇವೆ, ಎಸಿ ಕೋರ್ಟ್ನಲ್ಲಿ ಐದು ವರ್ಷದ ಬಾಕಿ ಪ್ರಕರಣ೩೨,೩೩೭ ರಲ್ಲಿ ೩,೭೧೫ ಬಾಕಿ ಇವೆ, ೨.೨೧ ಕೋಟಿ ಆರ್‌ಟಿಸಿಗೆ ಆಧಾರ್ ನೋಂದಣಿ ಮಾಡಲಾಗಿದೆ. ಸಿವಿಲ್ ಕೋರ್ಟ್ನಲ್ಲಿಯ ಅರ್ಧ ಪ್ರಕರಣಗಳು ಭೂ ವ್ಯಾಜ್ಯದ ಪ್ರಕರಣಗಳಾಗಿವೆ. ಜಿಲ್ಲಾ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗಳಲ್ಲಿ ಭೂ ವಾಜ್ಯ ಪ್ರಕರಣಗಳು ನಡೆಯುತ್ತಿವೆ. ಭೂ ವಾಜ್ಯಗಳಿಗೆ ವಿರಾಮ ಹಾಕಲು ಭೂ ಗ್ಯಾರಂಟಿ ತರಲಾಗಿದೆ. ಮುಖ್ಯಮಂತ್ರಿಗಳು ಹಕ್ಕುಪತ್ರ ವಿತರಣೆಯನ್ನು ಆಂದೋಲನೆ ರೀತಿಯಲ್ಲಿ ಮಾಡಲು ಸೂಚಿಸಿದ ಹಿನ್ನಲೆಯಲ್ಲಿ ಅವರ ಸೂಚನೆಯನ್ನು ಚಾಚೂ ತಪ್ಪದೇ ಜಾರಿಗೆ ತರಲಾಗಿದೆ ಎಂದರು.
ಗ್ರಾಮ ಲೆಕ್ಕಾಧಿಕಾರಿಗಳಿಂದ ಉಪ ವಿಭಾಗಾಧಿಕಾರಿಗಳ ವರೆಗೆ ಎಲ್ಲರ ಪರಿಶ್ರಮದಿಂದ ಜನತೆ ಪರವಾಗಿ ಕೆಲಸಮಾಡಲು ಸಾಧ್ಯವಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ರೂ.೫ ಕೋಟಿ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ ಹಾಗೂ ಈ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಹಕ್ಕುಪತ್ರ ವಿತರಣೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರಗಳು, ಎ.ಡಿ.ಎಲ್,ಆರ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಇತರರನ್ನು ಸನ್ಮಾನಿಸಲಾಯಿತು.
ಹಕ್ಕುಪತ್ರ ವಿತರಣೆ: ವೇದಿಕೆಯಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ಸೇರಿದಂತೆ ಗಣ್ಯರು ಕಂದಾಯ, ಇ-ಪೋತಿ, ದರಖಾಸ್ತ್ ಪೋಡಿ, ಪಿಎಂಜಿಎ, ಬಗರಹುಕುಂ ಹಕ್ಕುಪತ್ರಗಳನ್ನು ಹಾವೇರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಗದಗ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದರು.
ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ, ಇಂಧನ ಖಾತೆ ಸಚಿವ ಕೆ.ಜೆ.ಜಾರ್ಚ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ ಬಿ.ಎಸ್, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಸೈಯದ್ ಅಜೀಮಪೀರ್ ಎಸ್ ಖಾದ್ರಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಶಾಸಕರಾದ ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರ ಅಹ್ಮದಖಾನ್ ಪಠಾಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ವಿವಿಧ ಜಿಲ್ಲೆಗಳ ಶಾಸಕರು, ವಿವಿಧ ನಿಗಮಗಳ ಪದಾಧಿಕಾರಿಗಳು, ಜನಪ್ರತಿನಿಗಳು, ಮುಖಂಡರು, ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು(ವಿತ್ತೀಯ ಸುಧಾರಣೆ) ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿಶಾಲ್ ಆರ್., ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ೨.೨೦ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ;ನಮ್ಮದು ನುಡಿದಂತೆ ನಡೆದ ಸರ್ಕಾರ -ಮುಖ್ಯಮಂತ್ರಿ ಸಿದ್ಧರಾಮಯ್ಯ



