ಬೆಳಗಾವಿ : ಬೈಲಹೊಂಗಲ ತಾಲ್ಲೂಕಿನ ಮರಕುಂಬಿ ಗ್ರಾಮದ ಇನಾಂದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಾಯ್ಲರ್ ಸ್ಫೋಟದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಗಾಯಗೊಂಡಿದ್ದ ಇನ್ನೂ ಮೂರು ಕಾರ್ಮಿಕರು ಗುರುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ನಡೆದ ಈ ದುರ್ಘಟನೆಯಿಂದ ಕಾರ್ಮಿಕ ವಲಯದಲ್ಲಿ ಆಘಾತ ಮೂಡಿದೆ. ಅಪಘಾತ ಸಂಭವಿಸಿ 24 ಗಂಟೆಗಳಿಗೂ ಹೆಚ್ಚು ಸಮಯ ಕಳೆದರೂ ಕಾರ್ಖಾನೆ ಆಡಳಿತವು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ಪರಿಹಾರ ಘೋಷಿಸಿಲ್ಲ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರಿಂದಾಗಿ ಕುಟುಂಬಸ್ಥರಲ್ಲಿ ಆಕ್ರೋಶ ಹೆಚ್ಚಾಗಿದೆ.
ಖಾಸಗಿ ಆಸ್ಪತ್ರೆಯ ಶವಗಾರದಲ್ಲಿ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಅಲ್ಲಿ ಮೃತರ ಸಂಬಂಧಿಕರು ಸೇರಿಕೊಂಡಿದ್ದಾರೆ. ವಿಶೇಷವಾಗಿ ಮೃತ ಕಾರ್ಮಿಕ ಗುರು ತಮ್ಮಣ್ಣನವರ್ ಅವರ ಕುಟುಂಬಸ್ಥರು ಶವಗಾರದ ಹೊರಗೆ ತೀವ್ರ ಶೋಕ ಮತ್ತು ಪ್ರತಿಭಟನೆ ನಡೆಸಿದರು.
ಮೃತರ ಕುಟುಂಬಸ್ಥರು ಕಾರ್ಖಾನೆ ಮಾಲೀಕರ ನಿರ್ಲಕ್ಷ್ಯವನ್ನು ಗಂಭೀರವಾಗಿ ಆರೋಪಿಸಿದ್ದು, ಆರು ಕಾರ್ಮಿಕರು ಸಾವನ್ನಪ್ಪಿದ ನಂತರವೂ ಕಾರ್ಖಾನೆ ಆಡಳಿತದ ಯಾರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ ಅಥವಾ ಸಂತಾಪ ಸೂಚಿಸಿಲ್ಲ ಎಂದು ದೂರಿದ್ದಾರೆ.
ಇನಾಂದಾರ್ ಸಕ್ಕರೆ ಕಾರ್ಖಾನೆಯನ್ನು ವಿಕ್ರಮ್ ಇನಾಂದಾರ್, ಪ್ರಭಾಕರ ಕೋರೆ ಹಾಗೂ ವಿಜಯ ಮೆಟಗುಡ್ಡಾ ಸಂಯುಕ್ತವಾಗಿ ನಿರ್ವಹಿಸುತ್ತಿದ್ದಾರೆ.
ಮೃತಪಟ್ಟ ಕಾರ್ಮಿಕರನ್ನು ಅಕ್ಷಯ ಚೋಪಡೆ (45)
ದೀಪಕ್ ಮನ್ನೊಳ್ಳಿ (31) ಸುದರ್ಶನ ಬಾನೋಶಿ (25)
ಭರತೇಶ್ ಸರವಾಡೆ (27) ಗುರು ತಮ್ಮಣ್ಣನವರ್ (26)
(ಇನ್ನೊಬ್ಬ ಕಾರ್ಮಿಕರು ನಂತರ ಮೃತಪಟ್ಟಿದ್ದಾರೆ)
ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಮತ್ತು ಕಾರ್ಖಾನೆ ಆಡಳಿತದ ನಿರ್ಲಕ್ಷ್ಯವಿದೆಯೇ ಎಂಬುದನ್ನು ತಿಳಿಯಲು ಸಂಬಂಧಿಸಿದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.



