ನವದೆಹಲಿ : ಭಾರತವು ರೈಲು ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಪ್ರಕಟಿಸಿದ್ದಾರೆ.
X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ರಕ್ಷಣಾ ಸಚಿವರು, ಮುಂದಿನ ಪೀಳಿಗೆಯ ಕ್ಷಿಪಣಿಯು 2000 ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಈ ಕ್ಷಿಪಣಿಯು ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್ ಲಾಂಚರ್ನಿಂದ ಇಂದು, ಗುರುವಾರ (ಸೆ.೨೫) ನಡೆಸಲಾದ ಈ ರೀತಿಯ ಮೊದಲ ಉಡಾವಣೆ ಮಾಡಲಾಗಿದ್ದು, ಯಾವುದೇ ರೈಲು ಜಾಲದಲ್ಲಿ ಇದನ್ನು ಉಡಾಯಿಸಬಹುದು.
ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯ ಯಶಸ್ವಿ ಪರೀಕ್ಷೆಗಾಗಿ ಡಿಆರ್ಡಿಒ , ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಮತ್ತು ಸಶಸ್ತ್ರ ಪಡೆಗಳನ್ನು ಸಿಂಗ್ ಅಭಿನಂದಿಸಿದರು, ಈ ಪರೀಕ್ಷೆಯು ಭಾರತವನ್ನು ರೈಲು-ಮೊಬೈಲ್ ವ್ಯವಸ್ಥೆಯಿಂದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿಸಿದೆ ಎಂದು ಹೇಳಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲೂ ‘ಆತ್ಮನಿರ್ಭರತ ಆಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶದಂತೆ ಇದು ಭಾರತದ ರಕ್ಷಣಾ ಸಾಮರ್ಥ್ಯಗಳಲ್ಲಿ ಸ್ವಾವಲಂಬನೆ ಉದ್ದೇಶದ ಒಂದು ಭಾಗವಾಗಿದೆ.

