ಯೋಧನ ಮೇಲೆ ಟೋಲ್‌ ಸಿಬ್ಬಂದಿ ಹಲ್ಲೆ: ಭಾರತೀಯ ಸೇನೆಯ ತೀವ್ರ ಖಂಡನೆ

A B Dharwadkar
ಯೋಧನ ಮೇಲೆ ಟೋಲ್‌ ಸಿಬ್ಬಂದಿ ಹಲ್ಲೆ: ಭಾರತೀಯ ಸೇನೆಯ ತೀವ್ರ ಖಂಡನೆ

ಮೀರತ : ಉತ್ತರ ಪ್ರದೇಶದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಹೋಗುತ್ತಿದ್ದ ಭಾರತೀಯ ಸೇನೆಯ ಯೋಧರೊಬ್ಬರನ್ನು ಕಂಬಕ್ಕೆ ಕಟ್ಟಿ  ಥಳಿಸಿದ ಪ್ರಕರಣದ ಬಗ್ಗೆ ಜನರಿಂದ ತೀವ್ರ ಆಕ್ರೋಷ ವ್ಯಕ್ತವಾಗಿದ್ದು ಘಟನೆಯನ್ನು ಭಾರತೀಯ ಸೇನೆಯು ತೀವ್ರವಾಗಿ ಖಂಡಿಸಿದೆ.

ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಯೋಧ ಕಪಿಲ್ ಮೇಲೆ ಉತ್ತರ ಪ್ರದೇಶದ ಮೀರತ ಜಿಲ್ಲೆಯಲ್ಲಿರುವ ಏಳೆಂಟು ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದರು. ಘಟನೆಯನ್ನು ಖಂಡಿಸಿರುವ ಭಾರತೀಯ ಸೇನೆಯ ಸೆಂಟ್ರಲ್ ಕಮಾಂಡ್‌, ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಪ್ರಕಟಿಸಿದೆ. ‘ಕರ್ತವ್ಯದಲ್ಲಿರುವ ಸೈನಿಕರ ಮೇಲೆ ಇಂಥ ಹಲ್ಲೆಯನ್ನು ಸೇನೆ ಬಲವಾಗಿ ಖಂಡಿಸುತ್ತದೆ. ಈ ಕುರಿತು ಉತ್ತರ ಪ್ರದೇಶ ಪೊಲೀಸ್‌ನ ಉನ್ನತ ಅಧಿಕಾರಿಗೆ ಪತ್ರ ಬರೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಲಾಗುವುದು’ ಎಂದಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕೊಲೆ ಯತ್ನ, ಅಕ್ರಮವಾಗಿ ಗುಂಪು ಸೇರಿರುವುದು ಮತ್ತು ದರೋಡೆ ಯತ್ನವನ್ನು ದಾಖಲಿಸಲಾಗಿದೆ. ಎನ್‌ಎಚ್‌ಎಐ ಜತೆ ಭಾರತೀಯ ಸೇನೆಯೂ ತನ್ನ ಪ್ರತಿಭಟನೆ ದಾಖಲಿಸಿದೆ. ಈ ಘಟನೆಯ ತಾರ್ತಿಕ ಅಂತ್ಯಕ್ಕೆ ಭಾರತೀಯ ಸೇನೆ ಬದ್ಧವಾಗಿದೆ ಎಂದು ಹೇಳಲಾಗಿದೆ.‌

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕ ವಲಯದಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಟೋಲ್‌ ಸುತ್ತಮುತ್ತಲಿನ ಹಲವು ಗ್ರಾಮಗಳ ನಾಗರಿಕರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಟೋಲ್ ನಿರ್ವಹಿಸುತ್ತಿರುವ ಕಂಪನಿಗೆ ನೀಡಿರುವ ಗುತ್ತಿಗೆ ರದ್ಧತಿಗೆ ಒತ್ತಾಯಿಸಿದರು.

ಶ್ರೀನಗರದ ಗೋಟ್ಕಾ ಗ್ರಾಮದಲ್ಲಿ ನಿಯೋಜನೆಗೊಂಡಿದ್ದ ಕಪಿಲ್, ಕರ್ತವ್ಯಕ್ಕೆ ಹಾಜರಾಗಲು ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಟೋಲ್‌ನಲ್ಲಿ ಉದ್ದನೆಯ ಸಾಲು ಇದ್ದ ಕಾರಣ, ಬೇಗನೆ ತೆರವುಗೊಳಿಸುವಂತೆ ಟೋಲ್ ಸಿಬ್ಬಂದಿಗೆ ಕಪಿಲ್ ಹೇಳಿದರು. ನಂತರ ತಮಗೆ ತಡವಾಗುತ್ತಿದೆ ಎಂದು ಮುಂದೆ ಸಾಗಿದರು. ಇದರಿಂದ ಬೂಮ್‌ ಬ್ಯಾರಿಯರ್‌ ಮುರಿಯಿತು. ಇದು ಕಪಿಲ್ ಮತ್ತು ಟೋಲ್ ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಇದು ವಿಕೋಪಕ್ಕೆ ಹೋದ ಪರಿಣಾಮ, ಟೋಲ್ ಸಿಬ್ಬಂದಿ ಕಪಿಲ್‌ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತು. ಕಪಿಲ್ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಆಗ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಮತ್ತು ಸಲ್ಲಿಕೆಯಾದ ದೂರು ಆಗ್ರಹಿಸಿ ಸಚಿನ, ವಿಜಯ, ಅನುಜ, ಅಂಕಿತ, ಸುರೇಶ ರಾಣಾ ಮತ್ತು ಅಂಕಿತ್ ಶರ್ಮಾ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಕಪಿಲ ಮತ್ತು ಅವರೊಂದಿಗೆ ಇದ್ದವರನ್ನು ಕಂಬಕ್ಕೆ ಕಟ್ಟಿಹಾಕಿ ದೊಣ್ಣೆಯಿಂದ ಇವರು ಹಲ್ಲೆ ನಡೆಸಿದ್ದರು. ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಉಳಿದವರನ್ನು ಬಂಧಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಗ್ರಾಮೀಣ ಭಾಗದ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ ಕುಮಾರ ಮಿಶ್ರಾ ತಿಳಿಸಿದ್ದಾರೆ.

ಘಟನೆಯ ತೀವ್ರ ವಿರೋಧದ ಮಾಹಿತಿ ಪಡೆದ ಹೆದ್ದಾರಿ ಪ್ರಾಧಿಕಾರವು ಪ್ರಕರಣ ನಡೆದ ಧರಮ್ ಸಿಂಗ್‌ ಮಾಲೀಕತ್ವದ ಟೋಲ್‌ ಎಜೆನ್ಸಿಗೆ ಸೋಮವಾರ ₹20 ಲಕ್ಷ ದಂಡ ವಿಧಿಸಿದೆ. ತನ್ನ ಒಪ್ಪಂದದ ಘೋರ ಉಲ್ಲಂಘನೆಯಾಗಿದೆ. ಟೋಲ್ ಸಿಬ್ಬಂದಿಯ ಈ ವರ್ತನೆ ಖಂಡನೀಯ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಗೆ ಪ್ರಾಧಿಕಾರ ಹಾಗೂ ಟೋಲ್ ಸಿಬ್ಬಂದಿ ಬದ್ಧರಾಗಿರಬೇಕು ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ಹೇಳಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.