ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ “ಮತ್ತೊಮ್ಮೆ ಭಯೋತ್ಪಾದನೆಯನ್ನು ವೈಭವೀಕರಿಸಿದ್ದಕ್ಕಾಗಿ” ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರದ್ದು “ಅಸಂಬದ್ಧ ನಾಟಕ” ಎಂದು ಭಾರತ ಶನಿವಾರ ಟೀಕಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತ್ಯುತ್ತರ ನೀಡುವ ಹಕ್ಕನ್ನು ಚಲಾಯಿಸುವಾಗ, ಭಾರತದ ರಾಜತಾಂತ್ರಿಕರಾದ ಪೆಟಲ್ ಗಹ್ಲೋಟ್ ಭಯೋತ್ಪಾದನೆ “ಅವರ (ಪಾಕಿಸ್ತಾನದ) ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ” ಎಂದು ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80 ನೇ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಈ ವರ್ಷದ ಆರಂಭದಲ್ಲಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಭಾರತದಿಂದ “ಅಪ್ರಚೋದಿತ ಆಕ್ರಮಣ”ವನ್ನು ತಮ್ಮ ದೇಶ ಎದುರಿಸಬೇಕಾಯಿತು ಎಂದು ಹೇಳಿದರು. ಪಾಕಿಸ್ತಾನದ ಸಶಸ್ತ್ರ ಪಡೆಗಳು “ಅದ್ಭುತ ವೃತ್ತಿಪರತೆ, ಶೌರ್ಯ ಮತ್ತು ಕುಶಾಗ್ರಮತಿ” ಯಿಂದ ದಾಳಿಯನ್ನು ಹಿಮ್ಮೆಟ್ಟಿಸಿದ್ದವು ಎಂದು ಅವರು ಹೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿ ಭಾರತದ ರಾಜತಾಂತ್ರಿಕರಾದ ಶ್ರೀಮತಿ ಗಹ್ಲೋಟ್ ಅವರು, ಏಪ್ರಿಲ್ 22 ರ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ಭಯೋತ್ಪಾದಕ ಸಂಘಟನೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಗೆ ರಕ್ಷಣೆ ನೀಡಿದ್ದಕ್ಕಾಗಿ ಮತ್ತು ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ನೀಡಿದ್ದಕ್ಕಾಗಿ ಪಾಕಿಸ್ತಾನದ ಭಯೋತ್ಪಾದಕ ನೀತಿಯನ್ನು ಜಾಲಾಡಿದರು.
“ಯಾವುದೇ ಮಟ್ಟದ ನಾಟಕ ಅಥವಾ ಯಾವುದೇ ಮಟ್ಟದ ಸುಳ್ಳುಗಳು ಸತ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ. ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಬರ್ಬರ ಹತ್ಯಾಕಾಂಡ ನಡೆಸಿದ ಹೊಣೆ ಹೊತ್ತ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಅನ್ನು ಏಪ್ರಿಲ್ 25, 2025 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಕ್ಷಿಸಿದ ಅದೇ ಪಾಕಿಸ್ತಾನ ಇದು” ಎಂದು ಅವರು ಪಾಕಿಸ್ತಾನವನ್ನು ಜಾಲಾಡಿದರು.
ಪೆಟಲ್ ಗಹ್ಲೋಟ್ ಅವರು ಪಾಕಿಸ್ತಾನವನ್ನು “ಭಯೋತ್ಪಾದನೆಯನ್ನು ನಿಯೋಜಿಸುವ ಮತ್ತು ರಫ್ತು ಮಾಡುವುದರಲ್ಲಿ ದೀರ್ಘಕಾಲದಿಂದ ನಿರತವಾಗಿರುವ” ದೇಶ ಎಂದು ಉಲ್ಲೇಖಿಸಿದರು ಮತ್ತು ರಾಷ್ಟ್ರವು “ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಹೋರಾಡುವಂತೆ ನಟಿಸುತ್ತ ಒಂದು ದಶಕದಿಂದ ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ನೀಡಿತ್ತು” ಎಂದು ನೆನಪಿಸಿದರು.
“ನಾವು ಯುದ್ಧವನ್ನು ಗೆದ್ದಿದ್ದೇವೆ ಮತ್ತು ಈಗ ನಾವು ನಮ್ಮ ಭಾಗದಲ್ಲಿ ಶಾಂತಿಯನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ” ಎಂಬ ಷರೀಫ್ ಹೇಳಿಕೆಗೆ ತಿರುಗೇಟು ನೀಡಿದ ಭಾರತದ ರಾಜತಾಂತ್ರಿಕ ಅಧಿಕಾರಿ, ಮೇ 10 ರಂದು ಪಾಕಿಸ್ತಾನದ ಸೈನ್ಯವು “ಹೋರಾಟವನ್ನು ನಿಲ್ಲಿಸುವಂತೆ ನೇರವಾಗಿ ನಮ್ಮೊಂದಿಗೆ ಮನವಿ ಮಾಡಿಕೊಂಡಿತು” ಎಂದು ಹೇಳಿದರು. ಪಾಕಿಸ್ತಾನದ ರನ್ ವೇಗಳು ಮತ್ತು ಹ್ಯಾಂಗರ್ಗಳಲ್ಲಿನ ಹಾನಿಯ ಚಿತ್ರಗಳು ಪುರಾವೆಯಾಗಿ ಲಭ್ಯವಿದೆ ಎಂದು ಅವರು ಹೇಳಿದರು.
“ಪ್ರಧಾನಿ ಹೇಳಿಕೊಂಡಂತೆ, ನಾಶವಾದ ರನ್ವೇಗಳು ಮತ್ತು ಸುಟ್ಟುಹೋದ ಹ್ಯಾಂಗರ್ಗಳು ಅವರಿಗೆ ವಿಜಯದಂತೆ ಕಂಡುಬಂದರೆ, ಪಾಕಿಸ್ತಾನವು ಅದನ್ನು ಆನಂದಿಸುವುದನ್ನು ಸ್ವಾಗತಿಸುತ್ತೇವೆ” ಎಂದು ಶ್ರೀಮತಿ ಗೆಹ್ಲೋಟ್ ಹೇಳಿದರು.
ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕರನ್ನು ಹಸ್ತಾಂತರಿಸಿ
ಪಾಕಿಸ್ತಾನದ ವಿದೇಶಾಂಗ ನೀತಿಯು “ಶಾಂತಿ, ಪರಸ್ಪರ ಗೌರವ ಮತ್ತು ಸಹಕಾರ”ವನ್ನು ಆಧರಿಸಿದೆ ಎಂದು ಷರೀಫ್ ತಮ್ಮ ಭಾಷಣದಲ್ಲಿ ಹೇಳಿದರು.
“ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ವಿವಾದಗಳ ಶಾಂತಿಯುತ ಇತ್ಯರ್ಥದಲ್ಲಿ ನಾವು ನಂಬಿಕೆ ಇಡುತ್ತೇವೆ” ಎಂದು ಅವರು ಹೇಳಿದರು. ಎಲ್ಲಾ ಬಾಕಿ ಇರುವ ವಿಷಯಗಳ ಕುರಿತು ಭಾರತದೊಂದಿಗೆ ಸಂಯೋಜಿತ, ಸಮಗ್ರ ಮತ್ತು ಫಲಿತಾಂಶ-ಆಧಾರಿತ ಸಂವಾದ”ಕ್ಕೆ ತಮ್ಮ ದೇಶ ಸಿದ್ಧವಾಗಿದೆ ಎಂದು ಅವರು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಮತಿ ಗಹ್ಲೋಟ್, “ಅವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ಮಾರ್ಗ ಸ್ಪಷ್ಟವಾಗಿದೆ. ಪಾಕಿಸ್ತಾನವು ತಕ್ಷಣವೇ ಎಲ್ಲಾ ಭಯೋತ್ಪಾದಕ ಶಿಬಿರಗಳನ್ನು ಮುಚ್ಚಿ ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕರನ್ನು ನಮಗೆ ಹಸ್ತಾಂತರಿಸಲಿ” ಎಂದು ಹೇಳಿದರು.
ಪಾಕಿಸ್ತಾನದ ಪ್ರಧಾನಿ ಶೆಜಬಾಜ್ ಷರೀಫ್ ಸಿಂಧೂ ಜಲ ಒಪ್ಪಂದವನ್ನು ಭಾರತವು ಅಮಾನತಿನಲ್ಲಿಟ್ಟ ವಿಷಯವನ್ನು ಪ್ರಸ್ತಾಪಿಸಿದರು, ಭಾರತವು ನೀರನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡಿದೆ ಮತ್ತು ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದರು. “ಈ ನೀರಿನ ಮೇಲೆ ನಮ್ಮ 24 ಕೋಟಿ ಜನರ ಬೇರ್ಪಡಿಸಲಾಗದ ಹಕ್ಕನ್ನು” ರಕ್ಷಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದರು. “ನಮಗೆ, ಈ ಸಿಂಧೂ ಒಪ್ಪಂದದ ಯಾವುದೇ ಉಲ್ಲಂಘನೆಯು ಯುದ್ಧದ ಕ್ರಿಯೆಯನ್ನು ಪ್ರತಿನಿಧಿಸುತ್ತದೆ” ಎಂದು ಅವರು ಹೇಳಿದರು.
ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಲಾಗಿದೆ.
ಷರೀಫ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನು ಸುಗಮಗೊಳಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು, ಅವರ ಹೇಳಿಕೆಗಳನ್ನು ಪ್ರತಿಧ್ವನಿಸಿದರು.
“ಶಾಂತಿಗಾಗಿ ಅಧ್ಯಕ್ಷ ಟ್ರಂಪ್ ಅವರ ಪ್ರಯತ್ನಗಳು ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಅಪಾಯಕಾರಿ ಯುದ್ಧವನ್ನು ತಪ್ಪಿಸಲು ಸಹಾಯ ಮಾಡಿದೆ” ಎಂದು ಅವರು ಹೇಳಿದರು, ಅಧ್ಯಕ್ಷ ಟ್ರಂಪ್ ಮಧ್ಯಪ್ರವೇಶಿಸದಿದ್ದರೆ, ಪೂರ್ಣ ಪ್ರಮಾಣದ ಯುದ್ಧದ ಪರಿಣಾಮಗಳು “ದುರಂತ”ವಾಗುತ್ತಿದ್ದವು ಎಂದು ಹೇಳಿದರು.
ಆಪರೇಷನ್ ಸಿಂದೂರ್ ಅಡಿಯಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಮತ್ತು ಮಿಲಿಟರಿ ಮೂಲಸೌಕರ್ಯದ ಮೇಲೆ ವೈಮಾನಿಕ ದಾಳಿಯ ನಂತರ ಟ್ರಂಪ್ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ಹೇಳಿಕೊಂಡಿದ್ದನ್ನು ಭಾರತ ಹಲವಾರು ಬಾರಿ ನಿರಾಕರಿಸಿದೆ.
ಪಾಕಿಸ್ತಾನದ ಜೊತೆಗಿನ ಯಾವುದೇ ಬಾಕಿ ಇರುವ ಸಮಸ್ಯೆಯನ್ನು “ದ್ವಿಪಕ್ಷೀಯವಾಗಿ ಪರಿಹರಿಸಲಾಗುವುದು” ಮತ್ತು “ಯಾವುದೇ ಮೂರನೇ ವ್ಯಕ್ತಿಗೆ ಅವಕಾಶವಿಲ್ಲ” ಎಂದು ಗಹ್ಲೋಟ್ ಪುನರುಚ್ಚರಿಸಿದರು. ಭಯೋತ್ಪಾದನೆಯ ವಿಷಯಕ್ಕೆ ಬಂದರೆ, ಭಯೋತ್ಪಾದಕರು ಮತ್ತು ಅವರ ಪ್ರಾಯೋಜಕರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಇದಕ್ಕೆ ಇಬ್ಬರೂ ಹೊಣೆಗಾರರಾಗಿರುತ್ತಾರೆ ಎಂದು ಅವರು ಹೇಳಿದರು.
“ಪರಮಾಣು ಬೆದರಿಕೆಯ ನೆಪದಲ್ಲಿ ಭಯೋತ್ಪಾದನೆಯನ್ನು ಮುಂದುವರಿಸಲು ನಾವು ಬಿಡುವುದಿಲ್ಲ. ಅಂತಹ ಬೆದರಿಕೆಗಳಿಗೆ ಭಾರತ ಎಂದಿಗೂ ಮಣಿಯುವುದಿಲ್ಲ. ಜಗತ್ತಿಗೆ ಭಾರತದ ಸಂದೇಶ ಸ್ಪಷ್ಟವಾಗಿದೆ; ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಇರಬೇಕು” ಎಂದು ಅವರು ಹೇಳಿದರು.

