ಧಾರವಾಡ, ಜ 13: ಧಾರವಾಡದ ಕಮಲಾಪುರ ಸರ್ಕಾರಿ ಶಾಲೆಯಿಂದ ಅಪಹರಣವಾಗಿದ್ದ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ಪತ್ತೆಯಾಗಿದ್ದು, ಪೊಲೀಸರು ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಪ್ರಕರಣದ ಆರೋಪಿ ಕೂಡ ಬಂಧನಕ್ಕೊಳಗಾಗಿದ್ದಾನೆ.
ಕಮಲಾಪುರ ಸರ್ಕಾರಿ ಶಾಲೆಯ 3ನೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ಬಾಲಕ ಹಾಗೂ ಒಬ್ಬ ಬಾಲಕಿಯನ್ನು ಸೋಮವಾರ ಮಧ್ಯಾಹ್ನ ಊಟದ ವಿರಾಮದ ವೇಳೆ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದ. ಈ ಘಟನೆ ಕಮಲಾಪುರದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಎಲ್ಲಾ ಠಾಣೆಗಳಿಗೆ ಮಾಹಿತಿ ರವಾನಿಸಿ ಶೋಧ ಕಾರ್ಯ ಆರಂಭಿಸಿದ್ದರು.
ಹುಡುಕಾಟದ ವೇಳೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಜೋಯಿಡಾ ಬಳಿ ಬೈಕ್ ಅಪಘಾತ ಸಂಭವಿಸಿರುವ ಮಾಹಿತಿ ಲಭಿಸಿತು. ಅಪಘಾತಕ್ಕೀಡಾದ ಬೈಕ್‌ನಲ್ಲಿ ಒಬ್ಬ ವ್ಯಕ್ತಿ ಹಾಗೂ ಇಬ್ಬರು ಮಕ್ಕಳು ಇದ್ದರು ಎಂಬುದು ತಿಳಿದುಬಂದಿತು.
ಸ್ಥಳಕ್ಕೆ ತೆರಳಿದ ಪೊಲೀಸರು ಮಕ್ಕಳೊಂದಿಗೆ ಮಾತನಾಡಿದಾಗ ಅಪಹರಣದ ವಿಷಯ ಬೆಳಕಿಗೆ ಬಂದಿತು. ವಿಚಾರಣೆ ವೇಳೆ ಆರೋಪಿ ಧಾರವಾಡ ನಗರದ ಅಬ್ದುಲ್ ಕರೀಂ ಎಂಬುದು ದೃಢಪಟ್ಟಿದೆ.
ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅಪಘಾತದಲ್ಲಿ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದ ಮುಂದಿನ ತನಿಖೆಗಾಗಿ ಧಾರವಾಡ ಉಪನಗರ ಠಾಣೆಯ ಪೊಲೀಸರ ತಂಡ ಜೋಯಿಡಾಗೆ ತೆರಳಿದೆ.



