ಬೆಳಗಾವಿ : ಕೇವಲ 500 ರೂಪಾಯಿಗಾಗಿ ಇಬ್ಬರು ಸೇರಿ ತಮ್ಮ ಸ್ನೇಹಿತನನ್ನೇ ಹೊಡೆದು ಹತ್ಯೆ ಮಾಡಿದ ಘಟನೆ ಯಳ್ಳೂರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಯಳ್ಳೂರಿನ ಪ್ರತಾಪ ಗಲ್ಲಿಯ ಮಿಥುನ ಮಹದೇವ ಮತ್ತು ಮನೋಜ ಇಂಗಳೆ ಎಂಬುವರು ತಮ್ಮದೇ ಗಲ್ಲಿಯಲ್ಲಿದ್ದ ಹುಸೇನ್ ತಾಸೆವಾಲೆ ಎಂಬವನನ್ನು ಹೊಡೆದು ಒದ್ದು ತಲೆಯನ್ನು ಗೋಡೆಗೆ ಅಪ್ಪಳಿಸಿ ನಂತರ ಅವರು ಪ್ರಜ್ಞೆ ಕಳೆದುಕೊಂಡು ಬಿದ್ದಾಗ ಪಲಾಯನಗೈದಿದ್ದಾರೆ. ನೆರೆಯವರ ಸಹಾಯದಿಂದ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಸೋಮವಾರ ಮುಂಜಾನೆ ಹುಸೇನ್ ಕೊನೆಯುಸಿರೆಳೆದನು. ಪಲಾಯನವಾಗಿದ್ದ ಆರೋಪಿಗಳನ್ನು ವಡಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ ಬೋರಸೆ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 45-ವರುಷದ ಹುಸೇನ್ ಸ್ಕ್ರ್ಯಾಪ್ ವ್ಯಾಪಾರ ಮಾಡುತ್ತಿದ್ದ. ಇವರಿಗೆ ಮಿಥುನ್ 500 ರೂಪಾಯಿ ಕೊಟ್ಟು ಕಬ್ಬಿಣದ ಸಲಾಕೆ ತರಲು ಹೇಳಿದ್ದ. ಹುಸೇನ್ ಸಮಯಕ್ಕೆ ಸರಿಯಾಗಿ ಕಬ್ಬಿನ ಕೊಟ್ಟಿರಲಿಲ್ಲ ಅಲ್ಲದೇ ಹಣವನ್ನೂ ಹಿಂದಿರುಗಿಸಿರಲಿಲ್ಲ. ಕೇಳಿದರೆ ಇಂದು, ನಾಳೆ ಎಂದು ಮುಂದಕ್ಕೆ ಹಾಕುತ್ತಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಮಿಥುನ ಮತ್ತು ಮನೋಜ ಸೇರಿ ಭಾನುವಾರ ರಾತ್ರಿ 11 ಗಂಟೆ ಸುಮಾರು ಹುಸೇನ್ ಮನೆಗೆ ಹೋಗಿ ವಾದ ಮಾಡಿದ್ದಾರೆ. ಬೆಳಿಗ್ಗೆಯಾದರೂ ಪರವಾಗಿಲ್ಲ ಹಣ ಪಡೆದೇ ಹೋಗುವುದು ಎಂದು ಹೇಳಿದ್ದಾರೆ. ವಾದದ ನಡುವೆ ಹುಸೇನ್ ಅವರನ್ನು ಹೊಡೆದಿದ್ದಾರೆ, ಕೂದಲು ಹಿಡಿದು ತಲೆಯನ್ನು ಗೋಡೆಗೆ ಅಪ್ಪಳಿಸಿದ್ದಾರೆ, ನೆಲಕ್ಕೆ ಬೀಳಲು ಒದ್ದಿದ್ದಾರೆ. “ದೇಹದ ಒಳಗಿನ ಅವಯವಗಳಿಗೆ ಹೆಚ್ಚು ಪೆಟ್ಟು ಆಗಿದ್ದರಿಂದ ಹುಸೇನ್ ಅಸುನೀಗಿದ್ದಾರೆ, ಆರೋಪಿಗಳನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಸೆಕ್ಷನ್ 101 ಮತ್ತು 103 ರನ್ವಯ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ತಿಳಿಸಿದರು.

