ಖಾನಾಪುರ : ಖಾನಾಪುರ ನಗರ ವ್ಯಾಪ್ತಿಯ ಬೆಳಗಾವಿ–ಗೋವಾ ಮಾರ್ಗದ ಮರಾಠಾ ಮಂಡಳ ಡಿಗ್ರಿ ಕಾಲೇಜು ದಿಂದ ಕರಂಬಳ ಕತ್ರಿ ವರೆಗೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದೆ. ಕೇಂದ್ರ ಸರ್ಕಾರದಿಂದ ಮಂಜೂರಾದ 14 ಕೋಟಿ ರೂ. ಅನುದಾನದೊಂದಿಗೆ ಈ ರಸ್ತೆಯ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಹೆಸ್ಕಾಂ ಕಚೇರಿ ಬಳಿ ಹಾಗೂ ಫಿಷ್ ಮಾರ್ಕೆಟ್ ಪ್ರದೇಶದ ದ್ವಿರಸ್ತೆಯ ಒಂದು ಬದಿಯಲ್ಲಿ ರಸ್ತೆ ಅಗೆದುಹಾಕುವ ಕಾರ್ಯ ನಡೆಯುತ್ತಿದ್ದು, ಇನ್ನೊಂದು ಬದಿ ಮೂಲಕ ಸಂಚಾರ ನಿರ್ವಹಿಸಲಾಗುತ್ತಿದೆ. ಮಲಪ್ರಭಾ ನದಿಯಿಂದ ಆರಂಭಿಸಿ ಈ ರಸ್ತೆಯ ಡಾಂಬರ್ ತೆಗೆಯುವ ಕಾರ್ಯವನ್ನು ಜೆಸಿಬಿ ಮೂಲಕ ಆರಂಭಿಸಲಾಗಿದೆ.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ ಅವರೊಂದಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ರಸ್ತೆ ಕಾಮಗಾರಿಗಾಗಿ ಹೋರಾಟ ನಡೆಸಿದ್ದರು. ಅವರ ಪ್ರಯತ್ನಗಳಿಂದ ಈ ಕಾಮಗಾರಿಗೆ 14 ಕೋಟಿ ರೂ. ಅನುದಾನ ಸಿಕ್ಕಿತು. ಆದರೆ ಅನುದಾನ ಮಂಜೂರಾದರೂ ಬಹಳ ಕಾಲದಿಂದ ಕೆಲಸ ಆರಂಭವಾಗಿರಲಿಲ್ಲ.ಈಗ
ಮೊದಲ ಹಂತದಲ್ಲಿ ಮಲಪ್ರಭಾ ನದಿಯಿಂದ ಮರಾಠಾ ಮಂಡಳ ಡಿಗ್ರಿ ಕಾಲೇಜು ವರೆಗೆ ರಸ್ತೆ ನಿರ್ಮಾಣ ಕೈಗೊಳ್ಳಲಾಗುತ್ತಿದ್ದು,
ಎರಡನೇ ಹಂತದಲ್ಲಿ ಮಲಪ್ರಭಾ ನದಿಯಿಂದ ಕರಂಬಳ ಕತ್ರಿವರೆಗೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗುತ್ತದೆ.
ಈ ರಸ್ತೆ ಸಂಪೂರ್ಣವಾಗಿ ಗುಂಡಿಗಳ ಸಾಮ್ರಾಜ್ಯ ನಿರ್ಮಾಣವಾಗಿ , ಮಾರ್ಪಟ್ಟಿತ್ತು. ಮಳೆಯಾದಾಗ ಗುಂಡಿಗಳಲ್ಲಿ ನೀರು ತುಂಬಿ ರಸ್ತೆ ಕೆರೆಯಂತೆ ಕಾಣಿಸುತ್ತಿತ್ತು. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ಈಗ ಕಾಮಗಾರಿಗೆ ಚಾಲನೆ ದೊರೆತಿರುವುದರಿಂದ ಪ್ರಯಾಣಿಕರು ಮತ್ತು ನಾಗರಿಕರಿಂದ ತೃಪ್ತಿ ವ್ಯಕ್ತವಾಗುತ್ತಿದೆ.

