ಬಾಲಕಿಯ ಅಪಹರಣಗೈದು ಅತ್ಯಾಚಾರ ಎಸಗಿದ ಮಹಾಸ್ವಾಮಿಗೆ ಶಿಕ್ಷೆ ಪ್ರಕಟ

A B Dharwadkar
ಬಾಲಕಿಯ ಅಪಹರಣಗೈದು ಅತ್ಯಾಚಾರ ಎಸಗಿದ ಮಹಾಸ್ವಾಮಿಗೆ ಶಿಕ್ಷೆ ಪ್ರಕಟ

ಬೆಳಗಾವಿ : ನಿಮ್ಮ ಮನೆಗೆ ಬಿಡುತ್ತೇನೆ ಎಂದು ಅಪ್ರಾಪ್ತ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಮಹಾಸ್ವಾಮಿಯೊಬ್ಬನ ಮೇಲಿನ ಆರೋಪ ಸಾಬೀತಾಗಿದೆ ಎಂದು ಶುಕ್ರವಾರ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದ್ದು, ಶಿಕ್ಷೆಯನ್ನು ಶನಿವಾರ ಪ್ರಕಟ ಮಾಡಿದೆ. ಆರೋಪಿಗೆ ಬರೋಬ್ಬರಿ 35 ವರ್ಷಗಳ ಕಠಿಣ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ಮೂಲದ, ಸದ್ಯ ರಾಯಬಾಗ ತಾಲೂಕು ಮೇಖಳಿ ಗ್ರಾಮದ ಶ್ರೀ ಹಠಯೋಗಿ ಲೋಕೇಶ್ವರ ಮಹಾಸ್ವಾಮಿ /ಲೋಕೇಶ್ವರ ಸಾಬಣ್ಣ ಜಂಬಗಿ (30) ಆರೋಪಿ.

ಬಾಲಕಿ ಅಪ್ರಾಪ್ತೆ ಎಂದು ಗೊತ್ತಿದ್ದರೂ 2025 ರ ಮೇ 13 ರಂದು ತನ್ನ ಕಾರಿನಲ್ಲಿ ಆಕೆಯನ್ನು ಬರಲು ಹೇಳಿ, ನಿಮ್ಮ ಮನೆಗೆ ಹೋಗುತ್ತಿದ್ದೇನೆ. ನೀನು ಬಾ, ನಿಮ್ಮ ಮನೆಗೆ ಬಿಡುತ್ತೇನೆ ಎಂದು ಬಾಲಕಿಯನ್ನು ಹತ್ತಿಸಿಕೊಂಡು ಅಪಹರಣ ಮಾಡಿಕೊಂಡು ಮಹಾಲಿಂಗಪುರ ಮಾರ್ಗವಾಗಿ ಬಾಗಲಕೋಟೆಗೆ ಹೋಗಿ ಅಲ್ಲಿಂದ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳಿದ್ದಾನೆ. ಅಲ್ಲಿನ ಲಾಡ್ಜ್ ನಲ್ಲಿ ಮೇ 14 ರಂದು ರೂಮ್ ಬುಕ್ ಮಾಡಿ ಬಾಲಕಿ ಮೇಲೆ ಒತ್ತಾಯ ಪೂರ್ವಕವಾಗಿ ಲೈಂಗಿಕ ಅತ್ಯಾಚಾರ ಮಾಡಿದ್ದಾನೆ.

ಅಲ್ಲಿಂದ ಬಾಗಲಕೋಟೆ ಜಿಲ್ಲೆಗೆ ಮೇ 16 ರಂದು ಬಂದು ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿಯೂ ಅತ್ಯಾಚಾರ ಮಾಡಿದ್ದಾನೆ. ನಂತರ ಕಾರಿನಲ್ಲಿ ಮಹಾಲಿಂಗಪುರದ ಬಸ್ ನಿಲ್ದಾಣದಲ್ಲಿ ಇಳಿಸಿ, ನಿಮ್ಮ ಮನೆಗೆ ಹೋಗು ಎಂದು ಹೇಳಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಾಖಲಾಧಿಕಾರಿ ರಾಜು ಪ್ರಕರಣ ದಾಖಲಿಸಿ ಕೊಂಡಿದ್ದರು. ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೋಡ ಮುಂದಿನ ತನಿಖೆ ಕೈಗೊಂಡಿದ್ದರು.

ಬಾಲಕಿಯನ್ನು ಅಪಹರಣ ಮಾಡಿದ ಕೃತ್ಯದ ಸಿಸಿ ಕ್ಯಾಮೆರಾ ದೃಶ್ಯಾವಳಿ ಕಂಡುಬಂದಿದೆ. ಮುಂದಿನ ತನಿಖೆಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಪ್ರಕರಣದ ವಿಚಾರಣೆ ಮಾಡಿದ್ದರು. ಒಟ್ಟು 8 ಸಾಕ್ಷಿಗಳ ವಿಚಾರಣೆ, 78 ದಾಖಲೆ ಮತ್ತು 9 ಮುದ್ದೆ ಮಾಲುಗಳ ಆಧಾರದ ಮೇಲೆ ಶ್ರೀ ಹಠಯೋಗಿ ಲೋಕೇಶ್ವರ ಮಹಾಸ್ವಾಮಿ ಮೇಲಿನ ಆರೋಪಣೆ ಸಾಬೀತಾಗಿವೆ ಎಂದು ತೀರ್ಪು ನೀಡಿದ್ದು ಶನಿವಾರ ಶಿಕ್ಷೆ ಪ್ರಕಟ ಮಾಡಿದ್ದಾರೆ.

ಆರೋಪಿಗೆ ಒಟ್ಟು 35 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡದ ಮೊತ್ತವನ್ನು ತುಂಬಲು ತಪ್ಪಿದಲ್ಲಿ ಎರಡು ವರ್ಷಗಳ ಶಿಕ್ಷೆ ಬಿಎನ್ ಎಸ್ ಕಲಂ 137 (2) ರ ಪ್ರಕಾರ 7 ವರ್ಷ ಶಿಕ್ಷೆ, ರೂ. 25,000 ದಂಡದ ಮೊತ್ತವನ್ನು ತುಂಬಲು ತಪ್ಪಿದಲ್ಲಿ ಆರು ತಿಂಗಳ ಶಿಕ್ಷೆ ಮತ್ತು ಕಲಂ 351 ರ ಪ್ರಕಾರ ಎರಡು ವರ್ಷಗಳ ದಂಡ ರೂ.3,000, ಕಲಂ 64ರ ಪ್ರಕಾರ 10 ವರ್ಷಗಳ ಶಿಕ್ಷೆ, ದಂಡ ರೂ. 50,000 ಮೊತ್ತವನ್ನು ತುಂಬಲು ತಪ್ಪಿದಲ್ಲಿ 1 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷ ಪರಿಹಾರ ಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಐದು ವರ್ಷಗಳ ವರೆಗೆ ಮುದ್ದತ್ತ ಠೇವಣಿಯಾಗಿ ಇಡಲು ನ್ಯಾಯಾಲಯ ತಿಳಿಸಿದೆ. ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.