ಬೆಳಗಾವಿ, 20: ಸಚಿವ ಸತೀಶ ಜಾರಕಿಹೊಳಿ ಅವರು ಇಟಲಿಯಲ್ಲಿ ನಿರ್ಮಿತವಾದ ಹೊಸ ಹೆಲಿಕಾಪ್ಟರ್ ಖರೀದಿ ಮಾಡಿದ್ದು ಈ ಹೆಲಿಕಾಪ್ಟರ್ “ಇಟಲಿ ಮೇಡ್ ಅಗಸ್ಟ” ಹೆಸರನ್ನು ಹೊಂದಿದೆ. ಅದರ ಬೆಲೆ ₹ 30 ಕೋಟಿ ರೂ. ಎನ್ನಲಾಗಿದೆ.
ಅಗಸ್ಟ ಡಬಲ್ ಇಂಜಿನ್ ಹೆಲಿಕಾಪ್ಟರ್ ಆಗಿದ್ದು ಸತೀಶ ಜಾರಕಿಹೊಳಿ ಅವರು ಈ ಹಿಂದೆ ಸಿಂಗಲ್ ಇಂಜಿನ್ ಹೆಲಿಕಾಪ್ಟರ್ ಹೊಂದಿದ್ದರು. ಹಳೆ ಹೆಲಿಕಾಪ್ಟರ್ ಮಾರಾಟ ಮಾಡಿ ಹೊಸ ಇಟಲಿ ಮೇಡ್ ಡಬಲ್ ಇಂಜಿನ್ ಅಗಸ್ಟ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ.
ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮನಲ್ಲಿ ಶುಕ್ರವಾರ ನೂತನ ಹೆಲಿಕಾಪ್ಟರನ್ನು ಪರಿಶೀಲಿಸಿದ ಸಚಿವರು, ಶೀಘ್ರವೇ ಇದು ನಮ್ಮೊಂದಿಗೆ ಹಾರಾಟಕ್ಕೆ ಸಿದ್ಧವಾಗಲಿದೆ ಎಂಬ ವಿಷಯವನ್ನು ತಮ್ಮ ಫೇಸಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಚಿವ ಸತೀಶ ಜಾರಕಿಹೊಳಿ ಅವರು ಉತ್ತರ ಕರ್ನಾಟಕದಲ್ಲಿ ಸ್ವಂತ ಹೆಲಿಕಾಪ್ಟರ್ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯದ್ಯಂತ ಪಕ್ಷ ಸಂಘಟನೆ ಸೇರಿದಂತೆ 2028ರ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ಈ ನೂತನ ಹೆಲಿಕಾಪ್ಟರ್ ಅನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪೂರಕವಾಗಿ ನೂತನ ಹೆಲಿಕಾಪ್ಟರ್ ಪರಿಶೀಲಿಸುತ್ತಿರುವ ಸಚಿವರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಇನ್ನು ಎರಡು ತಿಂಗಳಲ್ಲಿ ಹಾರಾಟಕ್ಕೆ ಅಣಿಯಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚಿನ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಾಧುನಿಕ ಡಬಲ್ ಇಂಜಿನ್ ಹೊಂದಿರುವ ಹೆಲಿಕಾಪ್ಟರ್ ಇದಾಗಿದ್ದು, ಐದು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್ ಅನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಹೊಂದಿದೆ. ಈ ಹೆಲಿಕಾಪ್ಟರ್ ಎತ್ತರದಿಂದಲೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಸಾಮರ್ಥ್ಯವನ್ನು ಹೊಂದಿದೆ. ಚಾಪರ್ ಶಕ್ತಿ ಹೀರಿಕೊಳ್ಳುವ ಆಸನಗಳನ್ನು ಹೊಂದಿದೆ, ಇದು ಅಪಘಾತದ ಸಂದರ್ಭದಲ್ಲಿ ಅದರ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಸುಧಾರಿತ ವೈರ್ಲೆಸ್ ಸಂವಹನ ವ್ಯವಸ್ಥೆಯನ್ನು ಹೊಂದಿದೆ.

