ಹಾವೇರಿ: ವರದಾ-ಬೆಡ್ತಿ ನದಿ ಜೋಡಣೆ ಯೋಜನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಡಿ.ಪಿ.ಆರ್.ಮಾಡಲಾಗುತ್ತಿದ್ದು, ಯೋಜನೆ ಸಾಧಕ-ಬಾಧಕಗಳ ಕುರಿತು ತಜ್ಞರಿಂದ ಸಲಹೆ ಪಡೆದುಕೊಳ್ಳಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಎಂದು ತಿಳಿದಿರು.
ನಗರದ ದಿ.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ೧೯೯೪ರಿಂದ ವರದಾ -ಬೆಡ್ತಿ ನದಿ ಜೋಡಣೆ ಕುರಿತು ಪ್ರಸಾಪ್ತವಾಗುತ್ತಿದೆ. ಪ್ರಕೃತಿಯ ಸದುಪಯೋಗ ಹಾಗೂ ಸದ್ವಿನಿಯೋಗಮಾಡಿಕೊಳ್ಳಬೇಕು. ಎಲ್ಲರೂ ಸೇರಿ ಚರ್ಚಿಸಿದಾಗ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಈ ವಿಷಯದಲ್ಲಿ ರಾಜಕಾರಣ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಮಣ್ಣು-ಮರಳು ಅಕ್ರಮ ಸಾಗಾಣಿಕೆ ಮೇಲೆ ನಿಗಾ: ಕೈಗಾರಿಕಾ ಕಾರಿಡಾರ ಸ್ಥಳದಲ್ಲಿನ ರೂ.೪೦ ರಿಂದ ೫೦ ಕೋಟಿ ಮೊತ್ತದ ಮಣ್ಣು ಅಕ್ರಮ ಸಾಗಾಣಿಕೆ ಹಾಗೂ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆಯಲ್ಲಿ ಮಣ್ಣು-ಮರಳು ಅಕ್ರಮ ಸಾಗಾಣಿಕೆ ಬಗ್ಗೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವಿಷಯವಾಗಿ ತನಿಖೆ ನಡೆಸಿ ಸಂಬAಧಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು. ಇಂದು ಕೈಗಾರಿಕಾ ಕಾರಿಡಾರ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಗೆ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಹಾವೇರಿ ವೈದ್ಯಕೀಯ ಕಾಲೇಜು ಆವರಣದಲ್ಲಿ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಹಾವೇರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಸಕ್ತ ೧೫೦ ಇರುವ ವೈದ್ಯಕೀಯ ಸೀಟುಗಳು ೨೦೦ಕ್ಕೆ ಹೆಚ್ಚಿಸುವ ಅರ್ಹತೆ ಪಡೆದುಕೊಳ್ಳಲಾಗಿದೆ. ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ರೂ.೧೦ ಕೋಟಿ ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುವುದು. ಜಿಲ್ಲೆಯ ಎಲ್ಲ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.
ಫೆ.೧೩ ರಂದು ಹಕ್ಕುಪತ್ರ ವಿತರಣಾ ಸಮಾವೇಶ: ಹಾವೇರಿ ನಗರದಲ್ಲಿ ಫೆ.೧೩ ರಂದು ಕಂದಾಯ ಇಲಾಖೆ ಹಕ್ಕುಪತ್ರ ವಿತರಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಾನ್ಯಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಹೊಸಪೇಟೆ ಕಾರ್ಯಕ್ರಮಕ್ಕಿಂತ ಒಳ್ಳೆಯ ಕಾರ್ಯಕ್ರಮ ಮಾಡಲು ಉತ್ಸುಕರಾಗಿದ್ದೇವೆ ಎಂದರು.
ಖರೀದಿ ಹಣ ನೇರ ಫಲಾನುಭವಿ ಖಾತೆಗೆ ಜಮೆ: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರ ಖಾತೆಗೆ ನೇರ ಹಣ ವರ್ಗಾವಣೆ ಯಾಗುತ್ತದೆ. ಯಾವುದೇ ಮಧ್ಯವರ್ತಿಗಳಿಗೆ ಹೋಗುವುದಿಲ್ಲ. ಎಫ್.ಎಂ.ಕ್ಯೂ ಗುಣಮಟ್ಟ ಆಧರಿಸಿ ಮೆಕ್ಕೆಜೋಳ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಮನೆಗಳ ಹಸ್ತಾಂತರ: ನಗರದ ಹೊರವಲಯದಲ್ಲಿ ನಿರ್ಮಾಣ ಮಾಡುತ್ತಿರುವ ಜಿ+೧ ಮನೆಗಳನ್ನು ಈವರೆಗೆ ಹಂಚಿಕೆ ಮಾಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಬರುವ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಶಾಸಕರು ಹಾಗೂ ವಿಧಾನಸಭೆ ಉಪಾಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ ಉಪಸ್ಥಿತರಿದ್ದರು
ಹಾವೇರಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ರೂ.೧೦ ಕೋಟಿ,ವರದಾ-ಬೆಡ್ತಿ ನದಿ ಜೋಡಣೆ ಯೋಜನೆ ಸಂಪೂರ್ಣ ಬೆಂಬಲ -ಸಚಿವ ಶಿವಾನಂದ ಪಾಟೀಲ.



