ಸಿಎಂ, ಡಿಸಿಎಂ ಸ್ವಾಗತಕ್ಕೆ ಯಾಲಕ್ಕಿ ಕಂಪಿನ ನಗರಿ ಸಜ್ಜು ; ಮೆಡಿಕಲ್‌ ಕಾಲೇಜು ಕಟ್ಟಡ ಉದ್ಘಾಟನೆ ಇಂದು* ಸಿದ್ಧತೆ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ

A B Dharwadkar
ಸಿಎಂ, ಡಿಸಿಎಂ  ಸ್ವಾಗತಕ್ಕೆ ಯಾಲಕ್ಕಿ ಕಂಪಿನ ನಗರಿ ಸಜ್ಜು ; ಮೆಡಿಕಲ್‌ ಕಾಲೇಜು ಕಟ್ಟಡ ಉದ್ಘಾಟನೆ ಇಂದು* ಸಿದ್ಧತೆ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ

ಹಾವೇರಿ: ಸರ್ಕಾರಿ ಮೆಡಿಕಲ್‌ ಕಾಲೇಜು ಕ್ಯಾಂಪಸ್‌ ಸೇರಿದಂತೆ ವಿವಿಧ ಇಲಾಖೆ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನಾಳೆ ಬುಧವಾರ ನಡೆಯಲಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಸರ್ಕಾರಿ ಮೆಡಿಕಲ್‌ ಕಾಲೇಜು ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಕಾರ್ಯಕ್ರಮದ ಸಿದ್ದತೆಗೆ ಎರಡು ದಿನಗಳಿಂದ ಹಾವೇರಿಯಲ್ಲಿ ವಾಸ್ತವ್ಯ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮಂಗಳವಾರ ಮೆಡಿಕಲ್‌ ಕಾಲೇಜು, ಕಾರ್ಯಕ್ರಮದ ವೇದಿಕೆಯ ಸಿದ್ದತೆ ವೀಕ್ಷಣೆ ಮಾಡಿದರು. ಮುಖ್ಯಮಂತ್ರಿಗಳು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ಮಠಕ್ಕೂ ತೆರಳಿ ಸ್ವಾಮೀಜಿಗಳೊಂದಿಗೆ ಚರ್ಚೆ ಮಾಡಿದರು.

ಮೆಡಿಕಲ್‌ ಕಾಲೇಜಿಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ ಅವರನ್ನು ಡೀನ್‌ ಹಾಗೂ ನಿರ್ದೇಶಕ ಪ್ರದೀಪಕುಮಾರ್‌ ಅವರು ವಿವಿಧ ವಿಭಾಗಗಳಿಗೆ ಕರೆದೊಯ್ದು ವಿವರಣೆ ನೀಡಿದರು. ಕೌಶಲ್ಯ ಪ್ರಯೋಗಾಲಯ, ಸಭಾಂಗಣ, ಉಪನ್ಯಾಸ ಕೊಠಡಿ, ಗ್ರಂಥಾಲಯಗಳನ್ನು ವೀಕ್ಷಣೆ ಮಾಡಿದರು. ಸಭಾಂಗಣವನ್ನು ಇತರ ವೈದ್ಯಕೀಯ ಕಾಲೇಜಿಗಳಿಗಿಂತ ಭಿನ್ನವಾಗಿ ನಿರ್ಮಾಣ ಮಾಡಲಾಗಿದೆ. ಗ್ರಂಥಾಲಯದಲ್ಲಿ ಕನ್ನಡ ವಿಭಾಗ ಕೂಡ ಇದೆ. ಟ್ರೈನರ್‌ಗಳಿಂದ ಯೋಗ ಮತ್ತು ಕ್ರೀಡಾ ಚಟುವಟಿಕೆಗಳಿಗ ತರಬೇತಿ ನೀಡಲಾಗುತ್ತಿದೆ ಎಂದು ಡೀನ್‌ ಸಚಿವರಿಗೆ ವಿವರಿಸಿದರು.

ಕಾಲೇಜು ಕ್ಯಾಂಪಸ್‌ ಅವರಣದಲ್ಲೇ ಸುಮಾರು ಆರು ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ ಅವರು ಕೆಲವು ಸಲಹೆ ಸೂಚನೆ ನೀಡಿದರು.

ವೇದಿಕೆಯಲ್ಲಿ ಗೊಂದಲಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಆಗಬಾರದು. ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ವೇದಿಕೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಸೇರದಂತೆ ಹಾಗೂ ಕಾರ್ಯಕ್ರಮದ ಶಿಸ್ತಿಗೆ ಭಂಗವಾಗದಂತೆ ನೋಡಿಕೊಳ್ಳಬೇಕು. ಇಲ್ಲಿನ ವ್ಯವಸ್ಥೆ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಸೂಚನೆ ನೀಡಿದರು.

ನಂತರ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ನೂತನ ಅತಿಥಿ ಗೃಹ ವೀಕ್ಷಣೆ ಮಾಡಿ ಹುಕ್ಕೆರಿ ಮಠಕ್ಕೆ ತೆರಳಿದರು.

ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹುಕ್ಕೇರಿ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು, ಶ್ರೀ. ಮ.ನಿ.ಪ್ರ ಸದಾಶಿವ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಶ್ರೀಗಳಿಂದ ಮಾಹಿತಿ ಪಡೆದು ಚರ್ಚೆ ಮಾಡಿದರು.

ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣವರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಂಜೀವಕುಮಾರ್‌ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ್‌, ಎಸ್ಪಿ ಯಶೋಧಾ ವಂಟಗೋಡಿ, ಜಿಲ್ಲಾ ಸರ್ಜನ್‌ ಡಾ. ಪಿ. ಆರ್‌. ಹಾವನೂರು, ಹಿಮ್ಸ್‌ ಆರ್ಥಿಕ ಸಲಹೆಗಾರ ಡಾ. ದಿನೇಶ ಕೆ.ಎಸ್‌. ಪ್ರಿನ್ಸಿಪಾಲ್‌ ಡಾ. ಆಶಾಕಿರಣ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಲೇಜು ವಿಶೇಷತೆ

ಹಾವೇರಿ ಹೊರವಲಯದಲ್ಲಿ ಸುಮಾರು 56 ಎಕರೆ ಪ್ರದೇಶದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕ್ಯಾಂಪಸ್‌ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಏಕಕಾಲಕ್ಕೆ ಹಾವೇರಿ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಅವುಗಳಲ್ಲಿ ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗಿರುವ ಹೆಗ್ಗಳಿಕೆಯನ್ನು ಹಾವೇರಿ ಕಾಲೇಜು ಹೊಂದಿದೆ.

ಮೊದಲ ವರ್ಷದ ಪದವಿಯ ಪರೀಕ್ಷೆಯನ್ನು ಸ್ವಂತ ಕಟ್ಟಡದಲ್ಲೇ ನಡೆಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಮಗಾರಿ ಆರಂಭಿಸಲಾಗಿದ್ದು, ಆಡಳಿತ ವಿಭಾಗ, ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್‌, ಸಿಬ್ಬಂದಿ ವಸತಿ ಗೃಹಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡಲಾಗಿದೆ.

ವಾರ್ಷೀಕ 150 ವಿದ್ಯಾರ್ಥಿಗಳಂತೆ ಈಗ ಒಟ್ಟು 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2025-26ನೇ ಸಾಲಿನಲ್ಲಿ ಫಿಜಿಯಾಲಜಿ, ಬಯೋ ಕೆಮಿಸ್ಟ್ರಿ, ಫೋರೆನ್ಸಿಕ್‌ ಮೆಡಿಸಿನ್‌, ಜನರಲ್‌ ಮೆಡಿಸಿನ್‌ ಹಾಗೂ ಗೈನಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಅನುಮತಿ ನೀಡಿದೆ.

ವೈದ್ಯಕೀಯ ಕಾಲೇಜಿನೊಂದಿಗೆ ನರ್ಸಿಂಗ್‌ ಕಾಲೇಜನ್ನು ಜೋಡಿಸಲಾಗಿದ್ದು, ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ನರ್ಸಿಂಗ್‌ ಮಂಡಳಿಯಲ್ಲಿ 40 ಬಿಎಸ್ಸಿ ವಿದ್ಯಾರ್ಥಿಗಳು , 40 ಜಿಎನ್‌ಎಂ ನರ್ಸಿಂಗ್‌ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕೋಟ್‌
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹಾವೇರಿ ಜಿಲ್ಲೆ ಪ್ರವಾಸ ಕೈಗೊಂಡು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಈಗ ದೇವರಾಜ ಅರಸು ಅವರ ದೀರ್ಘಾವಧಿ ಆಡಳಿತದ ದಾಖಲೆಯನ್ನು ದಾಟಿದ ದಿನವೇ ಹಾವೇರಿಗೆ ಆಗಮಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡುತ್ತಿದ್ದಾರೆ. ಸರ್ಕಾರಿ ಮೆಡಿಕಲ್‌ ಕಾಲೇಜಿನ ಕನಸು ನನಸಾಗಿದೆ.

* ಶಿವಾನಂದ ಎಸ್‌. ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ ಹಾವೇರಿ,

ಫೋಟೋ ಕ್ಯಾಪ್ಷನ್‌
ಬುಧವಾರ ಮೆಡಿಕಲ್‌ ಕಾಲೇಜು ಕಟ್ಟಡ ಉದ್ಘಾಟನೆ ಹಿನ್ನೆಲೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣವರ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಂಜೀವ ಕುಮಾರ್‌ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್‌, ಡೀನ್‌ ಡಾ. ಪ್ರದೀಪ್‌ಕುಮಾರ್‌ ಮತ್ತಿತರರು ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.