ಹಾವೇರಿ: ಇವತ್ತು ಕೃಷಿಯನ್ನು ನಂಬಿ ಯಾವ ರೈತರು ಜೀವನವನ್ನು ನಡೆಸುತ್ತಿಲ್ಲ. ಕೃಷಿಯಲ್ಲಿ ಹೆಚ್ಚು ಖರ್ಚು, ಹೆಚ್ಚು ಸಾಲ, ಹೆಚ್ಚು ಸಮಸ್ಯೆ, ಕಡಿಮೆ ಲಾಭ, ಆಧುನಿಕ ವ್ಯವಸ್ಥೆ ನಮ್ಮ ರೈತರ ಬದುಕನ್ನು ಹದಿಗೆಡುಸುತ್ತಿದೆ ಎಂದು ಶಿಕ್ಷಣ ಚಿಂತಕ ಸಾವಯವ ಕೃಷಿ ತಜ್ಞ ನಿಜಲಿಂಗಪ್ಪ ಬಸೇಗಣ್ಣಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ ೨ ರಲ್ಲಿಂದು ಸ್ಪೂರ್ತಿ ವಿದ್ಯಾ ಕುಟೀರದ ಆಶ್ರಯದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಗ್ರಾಮೀಣ ಪ್ರದೇಶ ವಿದ್ಯಾವಂತ ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ. ಸಾಂಪ್ರದಾಯಕ ಕೃಷಿ ಪದ್ಧತಿ, ಕೃಷಿ ಉಪಕರಣಗಳು ಮರೆಯಾಗುತ್ತಿವೆ. ಕೃಷಿಕರು ತಮ್ಮ ಮಕ್ಕಳಲ್ಲಿ ಕೃಷಿ ಪ್ರೇಮ, ಆಸಕ್ತಿಯನ್ನು ಬೆಳೆಸಬೇಕು ಎಂದು ನಿಜಲಿಂಗಪ್ಪ ತಿಳಿಸಿದರು.
ಭೂಸಿರಿ ಮಿಲೆಟ್ಸ ಅಧ್ಯಕ್ಷ ಚಂದ್ರಕಾ0ತ ಸಂಗೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ ರೂ ೪೦೦೦ ರಾಜ್ಯ ಸರ್ಕಾರ ನೀಡುವುದು. ಸಿರಿಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ, ನಮ್ಮ ಸಂಸ್ಥೆಯಿAದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕೈಗಟುಕುವ ದರದಲ್ಲಿ ಇಡೀ ದೇಶಾದ್ಯಂತ ಮಾರಾಟವಾಗುತ್ತಿದೆ ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ನಮ್ಮ ದೇಶದಲ್ಲಿ ಒಂದು ಕೋಟಿ ರೈತರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಎನ್ನುತ್ತದೆ ೧೯೧೧ರ ಜನಗಣತಿ. ರೈತರು ಮಾಯವಾಗುತ್ತಿರುವುದರಿಂದ ಹಳ್ಳಿಗಳು ಉಳಿಯುವುದಿಲ್ಲ. ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ. ವೇತನ ಆಯೋಗದ ರೀತಿಯಲ್ಲಿ ರೈತ ಆದಾಯ ಆಯೋಗವನ್ನು ಸರ್ಕಾರ ಮಾಡಬೇಕು. ಶ್ರಮ ಸಂಸ್ಕೃತಿ ಮರೆಯಾಗುತ್ತಿದೆ. ಕಾರ್ಪೊರೇಟ್ ಸಂಸ್ಕೃತಿ ಕೃಷಿಯನ್ನು ಆವರಿಸುತ್ತಿದೆ. ಹೊಸ ನಾಗರಿಕತೆ ದೈಹಿಕ ಶ್ರಮ ತಪ್ಪಿಸಿಕೊಳ್ಳುವುದನ್ನು ಕಲಿಸುತ್ತದೆ ಎಂದು ಹೇಳಿದರು.
ಕರ್ಜಗಿಯ ಚನ್ನಬಸಪ್ಪ ಶಿರೂರು ಸಾವಯುವ ಕೃಷಿ ಕುರಿತು ಹಾಗೂ ಕೃಷಿಕ ಚಿನ್ನಪ್ಪ ಬಸೇಗಣ್ಣಿ ತೋಟದ ಬೆಳೆಗಳ ಕುರಿತು ಮಾತನಾಡಿದರು.
ಗ್ರಾಮದ ಹಿರಿಯ ಕೃಷಿಕ ದ್ಯಾಮಣ್ಣ ದೇಸೂರ ಹಾಗೂ ರೈತ ಮಹಿಳೆ ಸುಂದ್ರಮ್ಮ ಅಗಸಿಬಾಗಿಲ ಅವರನ್ನು ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ ಗೌರವಿಸಿ ಮಾತನಾಡಿ, ರೈತ ತನ್ನ ಉತ್ಪನ್ನಕ್ಕೆ ತಾನೇ ಬೆಲೆ ನಿಗದಿ ಮಾಡಿ ಮಾರುಕಟ್ಟೆ ನಿಯಂತ್ರಿಸುವ ಅಧಿಕಾರ ರೈತರಿಗೆ ಬಂದಾಗ ಮಾತ್ರ ಅನ್ನದಾತರು ಬದುಕು ಹಸನಾಗುವುದು ಎಂದರು.
ಆಧುನಿಕ ಕೃಷಿ ಯಂತ್ರೋಪಕರಣಗಳು, ಸಾಂಪ್ರದಾಯಕ ಕೃಷಿ ಉಪಕರಣ, ತೋಟಗಾರಿಕೆ ಉತ್ಪನ್ನಗಳು ಹಾಗೂ ಮಿತ್ರ ಕೀಟಗಳು, ಶತ್ರು ಕೀಟಗಳ ಪ್ರದರ್ಶನ ಗಮನ ಸೆಳೆದವು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ಪ ಬಳಲಕೊಪ್ಪದ ಅಧ್ಯಕ್ಷತೆ ವಹಿಸಿದರು. ಶಿವಪುತ್ರಪ್ಪ ಬಸೇಗಣ್ಣಿ, ರಮೇಶ, ನಂದೀಶ, ಬೀರೇಶ, ಬಸವರಾಜ ಬಸೇಗಣ್ಣಿ, ನಾಗರಾಜ ಬಸೇಗಣ್ಣಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ಮಂಜುನಾಥ ಕಮ್ಮಾರ ಸ್ವಾಗತಿಸಿದರು. ಶಂಕರ ಚಿಕ್ಕಳ್ಳಿ ನಿರೂಪಿಸಿದರು. ಮುಖ್ಯ ಶಿಕ್ಷಕ ವಿ.ವಿ.ಕಮತರ ವಂದಿಸಿದರು.



