ಹೊಸದಿಲ್ಲಿ: ಎನ್ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವಂತೆ ವಿರೋಧ ಪಕ್ಷಗಳೂ ಸೇರಿದಂತೆ ಎಲ್ಲ ಪಕ್ಷಗಳಿಗೂ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ
ರಾಧಾಕೃಷ್ಣನ್ ಅವರನ್ನು ಬೆಂಬಲಿಸುವಂತೆ ಹಾಗೂ ಸರ್ವಾನುಮತದಿಂದ ಉಪ ರಾಷ್ಟ್ರಪತಿಯನ್ನಾಗಿ ಚುನಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪಕ್ಷಗಳು, ವಿಶೇಷವಾಗಿ ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದರು.
ಈ ಸಂಸದರ ಸಭೆಯಲ್ಲಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ಬಿಜೆಪಿ ಸೇರಿದಂತೆ ಎನ್ಡಿಎ ಮಿತ್ರಪಕ್ಷಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರು. ಸಿ.ಪಿ. ರಾಧಾಕೃಷ್ಣನ್ ಅವರು ಬುಧವಾರ ತಮ್ಮ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಎನ್ಡಿಎ ಸಂಸದರ ಸಭೆಯಲ್ಲಿ ತಮಿಳುನಾಡಿದ ಮಾಗಿದ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ರಾಜ್ಯಪಾಲರಾದ ಸಿ.ಪಿ.ರಾಧಾಕೃಷ್ಣನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಎನ್ಡಿಎ ಸಂಸದರಿಗೆ ಪರಿಚಯಿಸಿದರು. ಈ ವೇಳೆ ಅವರ ಸಾರ್ವಜನಿಕ ಸೇವೆ ಹಾಗೂ ವೈವಿಧ್ಯಮಯ ಸಾಮರ್ಥ್ಯವನ್ನು ಪ್ರಶಂಸಿಸಿದರು.

