ಚಿತ್ರದುರ್ಗ, ಡಿ. ೨೪: ಖಾಸಗಿ ಟ್ರಾವೆಲ್ ಸ್ಲೀಪರ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದು, ಎರಡೂ ವಾಹನಗಳು ಬೆಂಕಿಗಾಹುತಿಯಾದ ಭೀಕರ ದುರಂತ ಸಂಭವಿಸಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಇದೆ.
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು ಖಾಸಗಿ ಸ್ಲೀಪರ್ ಕೋಚ್ ಬಸ್ ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಗೋಕಾರ್ಣದತ್ತ ತೆರಳುತ್ತಿತ್ತು. ಹಿರಿಯೂರಿನಿಂದ ಬೆಂಗಳೂರಿನತ್ತ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡರ್ ದಾಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ರಸ್ತೆ ಮಧ್ಯದಲ್ಲೇ ಸ್ಲೀಪರ್ ಬಸ್ ಹೊತ್ತಿ ಉರಿದಿದ್ದು, ಕಂಟೇನರ್ ಲಾರಿಗೂ ಬೆಂಕಿ ತಗುಲಿದೆ. ಬಸ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ.
ದುರಂತದಲ್ಲಿ ಬಸ್‌ನಲ್ಲಿದ್ದ ಕನಿಷ್ಠ 20 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಕಂಟೇನರ್ ಲಾರಿ ಚಾಲಕ ಕುಲದೀಪ ಕೂಡ ಸಜೀವ ದಹನಗೊಂಡಿದ್ದಾನೆ. ಬಸ್‌ನಲ್ಲಿ ಒಟ್ಟು 32 ಆಸನಗಳಿದ್ದು, 29 ಮಂದಿ ಪ್ರಯಾಣಿಸುತ್ತಿದ್ದರು. ಇವರಲ್ಲಿ 15 ಮಹಿಳೆಯರು ಮತ್ತು 14 ಪುರುಷರು ಇದ್ದರು ಎಂದು ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರಲ್ಲಿ ಬಹುಪಾಲು ಗೋಕರ್ಣದವರು.
ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹಿರಿಯೂರು ಹಾಗೂ ಶಿರಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲ ಗಂಭೀರ ಗಾಯಾಳುಗಳನ್ನು ಅಂಬುಲೆನ್ಸ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಾತ್ರಿಯೇ ಶೋಧ ಕಾರ್ಯ ಆರಂಭಿಸಿದ್ದು, ಬೆಳಿಗ್ಗೆಯವರೆಗೆ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಘಟನೆಯಲ್ಲಿ ಬಸ್ ಚಾಲಕ, ನಿರ್ವಾಹಕ ಹಾಗೂ ಕೆಲ ಪ್ರಯಾಣಿಕರು ಬಸ್‌ನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿಲೋಮೀಟರ್ ದೂರದವರೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶಿರಾದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಘಟನಾ ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಎನ್‌ಎ ಹಾಗೂ ಫಾರೆನ್ಸಿಕ್ ತಂಡವನ್ನು ಬೆಂಗಳೂರಿನಿಂದ ಸ್ಥಳಕ್ಕೆ ಕರೆಸಲಾಗಿದೆ.



