ಮತ ಕಳ್ಳತನದ ಜಾಗೃತಿಗೆ 5 ಕೋಟಿ ಸಹಿ ಸಂಗ್ರಹ: ಸಂಸದ ಸಾಗರ್‌ ಖಂಡ್ರೆ

A B Dharwadkar
ಮತ ಕಳ್ಳತನದ ಜಾಗೃತಿಗೆ 5 ಕೋಟಿ ಸಹಿ ಸಂಗ್ರಹ: ಸಂಸದ ಸಾಗರ್‌ ಖಂಡ್ರೆ

ಬೀದರ್‌: ‘ಕೇಂದ್ರ ಚುನಾವಣಾ ಆಯೋಗವು ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕು. ಆದರೆ, ಅದು ಬಿಜೆಪಿ ಪರ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ ಕ್ರಮವಲ್ಲ’ ಎಂದು ಸಂಸದ ಸಾಗರ್‌ ಖಂಡ್ರೆ ಹೇಳಿದರು.

ಮತ ಕಳ್ಳತನ ಸಹಿ ಸಂಗ್ರಹ ಅಭಿಯಾನಕ್ಕೆ ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಗುರುವಾರ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಮತ ಕಳ್ಳತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೇಶದಾದ್ಯಂತ 5 ಕೋಟಿ ಜನರ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತದೆ. ಬೀದರ್‌ ಜಿಲ್ಲೆಯಲ್ಲಿ ಕನಿಷ್ಠ 1 ಲಕ್ಷ ಜನರ ಸಹಿ ಸಂಗ್ರಹಿಸುವ ಗುರಿ ಇದೆ. ಸಹಿ ಸಂಗ್ರಹ ಪೂರ್ಣಗೊಂಡ ನಂತರ ಚುನಾವಣಾ ಆಯೋಗಕ್ಕೆ ಹಕ್ಕೊತ್ತಾಯ ಮಾಡಲಾಗುವುದು ಎಂದು ತಿಳಿಸಿದರು.

ಮಹದೇವಪುರ ಹಾಗೂ ಆಳಂದ ಕ್ಷೇತ್ರದ ಮತ ಕಳ್ಳತನದ ಬಗ್ಗೆ ಈಗಾಗಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸಾಕ್ಷಿ ಸಮೇತ ದೇಶಕ್ಕೆ ತಿಳಿಸಿದ್ದಾರೆ. ಎಲ್ಲೆಲ್ಲಿ ಮತ ಕಳ್ಳತನ ನಡೆದಿದೆಯೋ ಅಂತಹ ಕ್ಷೇತ್ರಗಳ ಮತಗಟ್ಟೆಗಳಲ್ಲಿ ನಡೆದ ಮತದಾನದ ಸಿಸಿಟಿವಿ ದೃಶ್ಯಾವಳಿ ಕೊಡಬೇಕು. ಡಿಜಿಟಲ್‌ ಡೇಟಾ ನೀಡಬೇಕೆಂಬ ಬೇಡಿಕೆ ಚುನಾವಣೆ ಆಯೋಗಕ್ಕೆ ಇಟ್ಟಿದ್ದೇವೆ. ಆದರೆ, ಆಯೋಗ ಅದನ್ನು ನೀಡಿಲ್ಲ ಎಂದು ಆರೋಪಿಸಿದರು.

ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಮ್ಮ ಪಕ್ಷದ ಸಂಸದರು ಆಯೋಗದ ಕಚೇರಿಗೆ ಮನವಿ ಕೊಡಲು ಹೋದಾಗ ನಮ್ಮನ್ನೆಲ್ಲ ಬಂಧಿಸಿದ್ದಾರೆ. ರಾಹುಲ್‌ ಗಾಂಧಿ ‘ಶಾಡೋ ಪಿಎಂ’ ಅವರೊಂದಿಗೆ ಈ ರೀತಿಯ ದುರ್ವರ್ತನೆ ಸಲ್ಲದು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ರಾಹುಲ್‌ ಗಾಂಧಿ ಅವರು ಕೇಳಿರುವ ಪ್ರಶ್ನೆಗಳಿಗೆ ಸೂಕ್ತ ವಿವರಣೆ ಕೊಡುವುದು ಬಿಟ್ಟು ಬಹಳ ಅಹಂಕಾರದಿಂದ ಮಾತನಾಡಿದ್ದಾರೆ. ಇದು ಆಯೋಗ ನಡೆದುಕೊಳ್ಳುವ ರೀತಿಯಲ್ಲ. ಈ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಗೂ ಅವಕಾಶ ನೀಡಿಲ್ಲ ಎಂದು ಕಿಡಿಕಾರಿದರು.

ಮೋಸದಿಂದ ಮತ ಕಳ್ಳತನ ಮಾಡಿದರೂ ಅನೇಕ ಕಡೆಗಳಲ್ಲಿ ಅವರಿಗೆ ಯಶಸ್ಸು ಸಿಕ್ಕಿಲ್ಲ. ಉದಾಹರಣೆಗೆ ನಾನು ಬೀದರ್‌ನಲ್ಲಿ ಗೆದ್ದಿದ್ದೇನೆ. ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಕನಿಷ್ಠ 25 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಡಿಮೆ ಅಂತರದಿಂದ ಸೋತಿದೆ. ಮತ ಕಳ್ಳತನವಾಗಿರದಿದ್ದರೆ ಬಿಜೆಪಿ ಸ್ಥಾನಗಳು ಇನ್ನಷ್ಟು ಕುಸಿಯುತ್ತಿದ್ದವು. ಮತ ಕಳ್ಳತನದಲ್ಲಿ ಯಾರ್‍ಯಾರು ಶಾಮಿಲಾಗಿದ್ದಾರೆ ಅವರಿಗೆ ಶಿಕ್ಷೆ ವಿಧಿಸಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕೆನ್ನುವುದು ಕಾಂಗ್ರೆಸ್‌ ಪಕ್ಷದ ಬೇಡಿಕೆ. ಅದಕ್ಕಾಗಿ ಪಕ್ಷವು ಜನರ ನಡುವೆ ಜಾಗೃತಿ ಮೂಡಿಸಿ, ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಮುಖಂಡರಾದ ಹಣಮಂತರಾವ್ ಚವಾಣ್‌, ಜಾನ್ ವೆಸ್ಲಿ, ಎಂ.ಡಿ. ಸಮಿ ಮತ್ತಿತರರು ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.