ಬೈಲಹೊಂಗಲ : ಸಾಲ ವಾಪಸ್ ನೀಡಲಿಲ್ಲ ಎಂದು ಸ್ನೇಹಿತನನ್ನೇ ಯುವಕ ಬರ್ಬರವಾಗಿ ಹತ್ಯೆಗೈದ ಘಟನೆ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದವ ಮಂಜುನಾಥ ಗೌಡರ(30). ಕೊಡಲಿಯಿಂದ ಕೊಚ್ಚಿ ದಯಾನಂದ ಗುಂಡ್ಲೂರ ಎಂಬವ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಆರೋಪಿ ದಯಾನಂದನು ಪೊಲೀಸರ ಮುಂದೆ ಶರಣಾಗಿದ್ದಾನೆ. ಕಳೆದ ವಾರ ದಯಾನಂದನ ಬಳಿ 2,000 ರೂ. ಸಾಲ ಪಡೆದುಕೊಂಡಿದ್ದ ಮಂಜುನಾಥನು ಒಂದು ವಾರದೊಳಗೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ. ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದ. ಈ ವಿಚಾರವಾಗಿ ನಿನ್ನೆ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ನಿನ್ನೆ ರಾತ್ರಿ ನಡೆದ ಜಗಳದ ಸಿಟ್ಟಿನಲ್ಲಿ ಬೆಳಗ್ಗೆ ಕೊಡಲಿಯಿಂದ ಸಿಕ್ಕಾಪಟ್ಟೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥ ಸಾವನ್ನಪ್ಪಿದ್ದಾನೆ.
ಸ್ನೇಹಿತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿ ಪೊಲೀಸರಿಗೆ ಶರಣಾಗಿದ್ದು ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

