ಬೆಳಗಾವಿ, ಸೆ. 19 : ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಂದೆ-ಮಗಳನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಮಡಿವಾಳಪ್ಪ ಕುಂದರಗಿ ಬಂಧಿತ ಆರೋಪಿಗಳು.
ಸೆ. 16ರಂದು ಬೆಳಗ್ಗೆ 11.15ರ ಸುಮಾರಿಗೆ ಧಾರವಾಡ ನಿವಾಸಿ, ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ (26) ಆಸ್ತಿ ನಂ.135ಕ್ಕೆ ಸಂಬಂಧಿಸಿದ ಹೆಸರು ದಾಖಲಾತಿ ಅರ್ಜಿಯ ವಿಚಾರಣೆಗಾಗಿ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದರು. ಈ ವೇಳೆ ಆಸ್ತಿ ವಿಚಾರವಾಗಿ ಆರೋಪಿಗಳು ಅವರೊಂದಿಗೆ ಗಲಾಟೆ ನಡೆಸಿ, ಕೊಡಗೋಲು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ರುದ್ರಪ್ಪ ಹಾಗೂ ಶಶಿಕಲಾ ಸ್ಥಳದಲ್ಲೇ ಮೃತಪಟ್ಟಿದ್ದರು.
ಗಲಾಟೆ ಬಿಡಿಸಲು ಮುಂದಾದ ರಾಹುಲ್ ಎಂಬುವವರ ಮೇಲೆಯೂ ಆರೋಪಿಗಳು ಕೊಡಗೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿ, ಬಳಿಕ ಸ್ಥಳದಿಂದ ಪರಾರಿಯಾಗಿದ್ದರು.
ಪ್ರಕರಣದ ಗಂಭೀರತೆ ಪರಿಗಣಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಹೆಚ್ಚುವರಿ ಎಸ್ಪಿ ಆರ್.ಬಿ. ಬಸರಗಿ ಹಾಗೂ ಬೈಲಹೊಂಗಲ ಡಿವೈಎಸ್‌ಪಿ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಬಿ. ಗುಡಗನಟ್ಟಿ, ಪಿಎಸ್‌ಐ ಭರತ್ ಎಸ್., ಪಿಎಸ್‌ಐ ಜಿ.ಜಿ. ಹಂಪಣ್ಣವರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆ.18ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.