ಬೆಂಗಳೂರು, ಜುಲೈ 17: ಶಾಲಾ ಶಿಕ್ಷಣ ಇಲಾಖೆಯು ಆರಂಭಿಸಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದ್ದು, ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿಗೆ ಆಂಗ್ಲ ಭಾಷಾ ಪ್ರೌಢಿಮೆ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವುದು ಕನ್ನಡ ಭಾಷೆ ಹಾಗೂ ರಾಜ್ಯದ ಭಾಷಾ ನೀತಿಗೆ ಗಂಭೀರ ಧಕ್ಕೆ ಉಂಟುಮಾಡುವ ಕ್ರಮವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆದಿರುವ ಅವರು, ಶಿಕ್ಷಣ ಇಲಾಖೆಯ ಈ ಕ್ರಮವು ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸುವ ಉದ್ದೇಶವನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನಿರಾಕರಿಸಿದಂತಾಗುತ್ತದೆ. ಕೂಡಲೇ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ ಈ ಕ್ರಮವನ್ನು ತಡೆಹಿಡಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿಶ್ವದಾದ್ಯಂತ ನಡೆದಿರುವ ಶಿಕ್ಷಣ ಸಂಶೋಧನೆಗಳು ಮಗುವಿನ ಬೌದ್ಧಿಕ ಬೆಳವಣಿಗೆ, ಸೃಜನಶೀಲತೆ ಹಾಗೂ ಕಲಿಕೆಯ ಗುಣಮಟ್ಟಕ್ಕೆ ಮಾತೃಭಾಷೆಯೇ ಅತ್ಯುತ್ತಮ ಮಾಧ್ಯಮ ಎಂಬುದನ್ನು ಪುನರುಚ್ಚರಿಸಿವೆ. ಇಂತಹ ಸಂದರ್ಭದಲ್ಲಿ ಮಾತೃಭಾಷೆಯ ಸ್ಥಾನವನ್ನು ದುರ್ಬಲಗೊಳಿಸುವ ಯಾವುದೇ ನೀತಿ ಕನ್ನಡದ ಭವಿಷ್ಯಕ್ಕೆ ಮಾರಕವಾಗಲಿದೆ. ಇದರ ಪರಿಣಾಮವಾಗಿ ಮುಂದಿನ ಪೀಳಿಗೆಯ ಕನ್ನಡದೊಂದಿಗಿನ ಭಾವನಾತ್ಮಕ, ಸಾಂಸ್ಕೃತಿಕ ಹಾಗೂ ಜ್ಞಾನಾತ್ಮಕ ಸಂಬಂಧವೂ ಕ್ಷೀಣಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಶಿಕ್ಷಕರ ಹುದ್ದೆಗಳನ್ನು ಒಳಗೊಳ್ಳಬೇಕು. ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿಗೆ ವಿಧಿಸಿರುವ ಆಂಗ್ಲ ಭಾಷಾ ಪ್ರೌಢಿಮೆ ಪರೀಕ್ಷೆಯನ್ನು ಹಿಂಪಡೆಯಬೇಕು. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಸ್ಥಾನಮಾನ ಹಾಗೂ ನಾಡಿನ ಆಶಯಕ್ಕೆ ತಕ್ಕ ಪ್ರಾಮುಖ್ಯತೆಯನ್ನು ಸರ್ಕಾರ ಕಾಪಾಡಬೇಕು ಎಂದು ಬಿಳಿಮಲೆ ಆಗ್ರಹಿಸಿದ್ದಾರೆ.
ಕನ್ನಡದ ಅಸ್ತಿತ್ವ, ಸರ್ಕಾರಿ ಶಾಲೆಗಳ ಸ್ವರೂಪ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಈ ವಿಷಯದಲ್ಲಿ ತ್ವರಿತವಾಗಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.