ಬೆಂಗಳೂರು, ಮೇ 29 : ರಾಜಕೀಯ ಸಿದ್ಧಾಂತಗಳನ್ನು ಮೀರಿದ ಧೀಮಂತ ನಾಯಕ, ಶೋಷಿತರು ಹಾಗೂ ಬಡವರ ಧ್ವನಿಯಾಗಿ ಸದಾ ಜನರ ಪರವಾಗಿ ನಿಂತ ಸಿದ್ದರಾಮಯ್ಯ ಅವರಿಗೆ ಅಧಿಕಾರವಾಗಲಿ, ಹುದ್ದೆಯಾಗಲಿ ಎಂದಿಗೂ ದೊಡ್ಡ ವಿಷಯವಾಗಿರಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷದ ಹೈಕಮಾಂಡ್ ಹಾಗೂ ಕಾಂಗ್ರೆಸ್ ನಾಯಕತ್ವದ ತೀರ್ಮಾನಕ್ಕೆ ಸಂಪೂರ್ಣ ಬದ್ಧರಾಗಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿರುವುದು ಅವರ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಅಂಟಿಕೊಂಡ ನಾಯಕನಲ್ಲ. ಪಕ್ಷದ ಶಿಸ್ತು, ಸಿದ್ಧಾಂತ ಹಾಗೂ ಸಂಘಟನೆಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವ ಧೀಮಂತ ನಾಯಕ. ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿರುವುದು ಅಧಿಕಾರಕ್ಕಿಂತ ಪಕ್ಷದ ತೀರ್ಮಾನ ಮತ್ತು ಮೌಲ್ಯಗಳಿಗೆ ಅವರು ನೀಡುವ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಬಡತನ ಮತ್ತು ಹಸಿವಿನ ನೋವನ್ನು ಹತ್ತಿರದಿಂದ ಅರಿತ ನಾಯಕನಾಗಿ ಸಿದ್ದರಾಮಯ್ಯ ಅವರು ಜಾರಿಗೆ ತಂದ ಅನ್ನಭಾಗ್ಯ ಯೋಜನೆ ರಾಜ್ಯದ ಜನಪರ ಕಾರ್ಯಕ್ರಮಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಹಸಿವು ಮುಕ್ತ ಕರ್ನಾಟಕದ ಧ್ಯೇಯದೊಂದಿಗೆ ಜಾರಿಗೆ ಬಂದ ಈ ಯೋಜನೆ ರಾಷ್ಟ್ರಮಟ್ಟದಲ್ಲಿಯೂ ಮಾದರಿಯಾಗಿದೆ ಎಂದು ದಿನೇಶ ಗುಂಡೂರಾವ ಹೇಳಿದ್ದಾರೆ.
ರಾಜ್ಯದ ಬಡ ಕುಟುಂಬಗಳ ಹೊಟ್ಟೆ ತುಂಬಿಸುವ ಮೂಲಕ ಸಿದ್ದರಾಮಯ್ಯ ಅವರು ಜನರ ಹೃದಯದಲ್ಲಿ ಅನ್ನರಾಮಯ್ಯ ಎಂಬ ಹೆಸರಿನಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ತಾವು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಸಂದರ್ಭದಲ್ಲಿ ಈ ಐತಿಹಾಸಿಕ ಯೋಜನೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ವಹಿಸಿ ಸಿದ್ದರಾಮಯ್ಯ ವಿಶ್ವಾಸ ತೋರಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಬೇಕೆಂಬ ಉದ್ದೇಶದಿಂದ ಆರಂಭಿಸಲಾದ 108 ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕೇಂದ್ರದ ಉದ್ಘಾಟನೆಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಭಾಗವಹಿಸಿದ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು. ಕೊನೆಯ ಕ್ಷಣದವರೆಗೂ ಜನರ ಆರೋಗ್ಯ, ಕಲ್ಯಾಣ ಮತ್ತು ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿದ ಆಡಳಿತಗಾರರಾಗಿ ಅವರು ನೆನಪಿನಲ್ಲಿ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.
ಕೋಮುವಾದಿ ಶಕ್ತಿಗಳ ವಿರುದ್ಧ ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳದ ದೃಢ ನಿಲುವು, ಸಾಮಾಜಿಕ ನ್ಯಾಯದ ಪರ ಬದ್ಧತೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನವು ಸಿದ್ದರಾಮಯ್ಯ ಅವರ ಆಡಳಿತದ ಪ್ರಮುಖ ಸಾಧನೆಗಳಾಗಿವೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ ಎಂದು ದಿನೇಶ ಗುಂಡೂರಾವ ತಿಳಿಸಿದ್ದಾರೆ.
ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಅವರು, ಅದು ಕೇವಲ ರಾಜಕೀಯ ಪ್ರಚಾರದ ಭಾಗವಾಗಿದೆ ಎಂದು ಹೇಳಿದ್ದಾರೆ. ಸುದೀರ್ಘ ರಾಜಕೀಯ ಜೀವನದಲ್ಲಿ ನೈಜ ಸಮಾಜವಾದಿಯಾಗಿ ಬದುಕಿದ ಸಿದ್ದರಾಮಯ್ಯ ಅವರ ರಾಜಕೀಯ ಮೌಲ್ಯಗಳು ಮತ್ತು ಜನಪರ ನಿಲುವುಗಳು ಮುಂದಿನ ಪೀಳಿಗೆಯ ನಾಯಕರಿಗೆ ಮಾದರಿಯಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯದ ಆಡಳಿತ ಮುಂದುವರಿಯಬೇಕಾದರೆ ಸಿದ್ದರಾಮಯ್ಯ ಅವರ ಅನುಭವ ಮತ್ತು ಮಾರ್ಗದರ್ಶನ ಮುಂದಿನ ದಿನಗಳಲ್ಲಿಯೂ ಅಗತ್ಯವಾಗಿದೆ. ರಾಜೀನಾಮೆಯ ಬಳಿಕವೂ ಅವರು ಸಕ್ರಿಯ ರಾಜಕಾರಣದಲ್ಲಿ ಮುಂದುವರಿದು ರಾಜ್ಯದ ಅಭಿವೃದ್ಧಿಗೆ ದಿಕ್ಕು ತೋರಿಸಲಿ ಎಂದು ಆಶಿಸಿರುವ ದಿನೇಶ ಗುಂಡೂರಾವ, ಇಂತಹ ಜನನಾಯಕರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದ್ದಾರೆ.