LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಮೇದಾಂತ ಆಸ್ಪತ್ರೆಗೆ ಸೋನಮ್ ವಾಂಗ್ಚುಕ ಸ್ಥಳಾಂತರಕ್ಕೆ ಹೈಕೋರ್ಟ ಅನುಮತಿ

ಹೊಸದಿಲ್ಲಿ, ಜುಲೈ 21: ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ ಅವರನ್ನು ಅವರ ಆಯ್ಕೆಯ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ ಮಂಗಳವಾರ ಅನುಮತಿ ನೀಡಿದೆ. ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ ಎಂಬುದರಲ್ಲಿ ಒಮ್ಮತವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ವಿಭಾಗೀಯ ಪೀಠ, ವಾಂಗ್ಚುಕ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿತು. ಸಫ್ದರಜಂಗ್ ಆಸ್ಪತ್ರೆಯಲ್ಲಿರುವ ಎಲ್ಲ ವೈದ್ಯಕೀಯ ದಾಖಲೆಗಳನ್ನು ತಕ್ಷಣವೇ ಮೇದಾಂತ ಆಸ್ಪತ್ರೆಗೆ ಹಸ್ತಾಂತರಿಸಬೇಕು. ಅಲ್ಲಿನ ವೈದ್ಯರ ತಂಡವೇ ಮುಂದಿನ ಚಿಕಿತ್ಸೆಯ ಹೊಣೆ ವಹಿಸಲಿದೆ ಎಂದು ನ್ಯಾಯಾಲಯ ಆದೇಶಿಸಿತು.

ವಾಂಗ್ಚುಕ ಪರ ಹಿರಿಯ ವಕೀಲ ಅಖಿಲ್ ಸಿಬಲ್, ಪ್ರತಿಭಟನೆಯ ಅವಧಿಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಸರ್ಕಾರದ ನಿಲುವು ಮಂಡಿಸಿದರು.

ವಿಚಾರಣೆ ವೇಳೆ ವೈದ್ಯಕೀಯ ವರದಿಗಳಲ್ಲಿ ವಾಂಗ್ಚುಕ ಅವರ ರಕ್ತದಲ್ಲಿನ ಪೊಟ್ಯಾಸಿಯಮ್ ಪ್ರಮಾಣ ಕಡಿಮೆಯಾಗಿರುವುದು, ಬಿಳಿ ರಕ್ತಕಣಗಳ ಸಂಖ್ಯೆ ಇಳಿಕೆಯಾಗಿರುವುದು ಹಾಗೂ ರೋಗನಿರೋಧಕ ಶಕ್ತಿ ಕುಂದಿರುವುದು ಉಲ್ಲೇಖಿಸಲಾಯಿತು. ಏಮ್ಸ್ ವೈದ್ಯರು, ಸೋಂಕಿನ ಅಪಾಯ ಹೆಚ್ಚಿರುವುದರಿಂದ ಅವರಿಗೆ ನಿರಂತರ ವೈದ್ಯಕೀಯ ನಿಗಾ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸರ್ಕಾರದ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ, ವಾಂಗ್ಚುಕ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಯಾವುದೇ ಆಕ್ಷೇಪವಿಲ್ಲ. ಆದರೆ ವೈದ್ಯರ ಸಲಹೆಗೆ ವಿರುದ್ಧವಾಗಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಾರದು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವೈದ್ಯರ ಅಭಿಪ್ರಾಯಗಳನ್ನು ಪರಿಗಣಿಸಿ ವಾಂಗ್ಚುಕ ಅವರನ್ನು ಅವರ ಆಯ್ಕೆಯ ಆಸ್ಪತ್ರೆಗೆ ಸ್ಥಳಾಂತರಿಸಲು ಆದೇಶಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿತು.

ವಿಚಾರಣೆ ವೇಳೆ ಅಖಿಲ್ ಸಿಬಲ್, ವಾಂಗ್ಚುಕ ಅವರ ಮೊಬೈಲ್‌ ಫೋನ್‌ ಕಸಿದುಕೊಳ್ಳಲಾಗಿದೆ. ಅವರಿಗೆ ಯಾರನ್ನೂ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಭೇಟಿ ನೀಡುವವರ ಮೇಲೂ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದರು.

ಸಫ್ದರಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ವಾಂಗ್ಚುಕ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಮೇಲ್ಮನವಿ ಸಲ್ಲಿಸಿದ್ದರು. ತಮ್ಮ ಆಯ್ಕೆಯ ಆಸ್ಪತ್ರೆಗೆ ಚಿಕಿತ್ಸೆ ಪಡೆಯುವ ಹಕ್ಕು ಸಂವಿಧಾನದ 21ನೇ ವಿಧಿಯಡಿ ಬದುಕುವ ಹಕ್ಕಿನ ಭಾಗವಾಗಿದೆ. ವಾಂಗ್ಚುಕ ಅವರನ್ನು ಅವರ ಒಪ್ಪಿಗೆಯಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸುವುದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿತ್ತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ