ಲಖನೌ, ಸೆ. 17 : ₹2 ಸಾವಿರಕ್ಕಿಂತ ಹೆಚ್ಚಿನ ಕೆಲವು ಯುಪಿಐ ವ್ಯಾಪಾರಿ ವಹಿವಾಟುಗಳಿಗೆ ಶೇ.0.4 ಎಂಡಿಆರ್ ಶುಲ್ಕ ವಿಧಿಸುವ ನಿರ್ಧಾರವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ತೀವ್ರವಾಗಿ ಟೀಕಿಸಿದ್ದು, ಇದು ಡಿಜಿಟಲ್ ಪಾವತಿಗಳ ಮೇಲೆ ತೆರಿಗೆ ವಿಧಿಸಿದಂತಾಗಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ದೇಶದ ಆರ್ಥಿಕತೆಯನ್ನು ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವುದಾಗಿ ಸರ್ಕಾರ ಹೇಳಿತ್ತು. ಆದರೆ ಈಗ ಜನರ ವಹಿವಾಟಿನಿಂದಲೇ ಹಣ ಗಳಿಸಲು ಮುಂದಾಗಿದೆ ಎಂದು ಟೀಕಿಸಿದ್ದಾರೆ. ಹಣದುಬ್ಬರ ಮತ್ತು ಭ್ರಷ್ಟಾಚಾರದ ಕುರಿತು ಸರ್ಕಾರದ ಬಳಿ ಉತ್ತರವಿಲ್ಲ ಎಂದೂ ಆರೋಪಿಸಿದ್ದಾರೆ.
ಹೊಸ ವ್ಯವಸ್ಥೆ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಸುವ ಯುಪಿಐ ವಹಿವಾಟು ಉಚಿತವಾಗಿಯೇ ಇರಲಿದೆ. ವ್ಯಾಪಾರಿಗಳಿಗೆ ಮಾಡುವ ₹2 ಸಾವಿರದವರೆಗಿನ ಪಾವತಿಗೂ ಶುಲ್ಕ ಇರುವುದಿಲ್ಲ. ಅದಕ್ಕಿಂತ ಹೆಚ್ಚಿನ ಅರ್ಹ ವ್ಯಾಪಾರಿ ವಹಿವಾಟಿಗೆ ಶೇ.0.4 ಎಂಡಿಆರ್ ಅನ್ವಯಿಸಲಿದ್ದು, ₹75 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಗರಿಷ್ಠ ₹300 ಮಿತಿ ನಿಗದಿಯಾಗಿದೆ.
ಈ ಶುಲ್ಕವನ್ನು ಗ್ರಾಹಕರು ನೇರವಾಗಿ ಪಾವತಿಸಬೇಕಾಗಿಲ್ಲ; ವ್ಯಾಪಾರಿಗಳ ಮೇಲೆ ಎಂಡಿಆರ್ ಅನ್ವಯವಾಗಲಿದೆ. ತಿಂಗಳಿಗೆ ₹1 ಲಕ್ಷದವರೆಗೆ ಯುಪಿಐ ಮೂಲಕ ಹಣ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ಮುಂದುವರಿಯಲಿದೆ. ರೈಲ್ವೆ, ದೂರಸಂಪರ್ಕ, ವಿಮೆ ಮತ್ತು ಇಂಧನ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ₹2 ಸಾವಿರಕ್ಕಿಂತ ಹೆಚ್ಚಿನ ವಹಿವಾಟಿಗೆ ₹5 ನಿಗದಿತ ಶುಲ್ಕ ಅನ್ವಯವಾಗಲಿದೆ.