ಭಟ್ಕಳ, ಸೆ. 17 : ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ವೇಳೆ ಮಸೀದಿ ಹಾಗೂ ಮದರಸಾ ಕಟ್ಟಡದ ಮೇಲೆ ಕಲ್ಲುತೂರಾಟ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಕಟ್ಟಡದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
ಭಟ್ಕಳದ ಗುಳ್ಳಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ತಲಾಂದ್ ಪ್ರದೇಶದಿಂದ ಗಣೇಶ ಮೂರ್ತಿ ವಿಸರ್ಜನೆಗಾಗಿ ಮೆರವಣಿಗೆ ಆರಂಭವಾಗಿದ್ದು, ಗುಳ್ಳಿ ರಸ್ತೆಯ ಮೂಲಕ ರೈಲ್ವೆ ನಿಲ್ದಾಣದತ್ತ ಸಾಗುತ್ತಿದ್ದ ಸಂದರ್ಭದಲ್ಲಿ ಮಸೀದಿ ಹಾಗೂ ಮದರಸಾ ಕಟ್ಟಡದ ಮೇಲೆ ಕಲ್ಲು ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಮಸೀದಿಯ ಕಿಟಕಿ ಗಾಜುಗಳು ಒಡೆದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಸಂಬಂಧ ಸ್ಥಳೀಯ ನಿವಾಸಿ ಅಬ್ದುಲ್ ಆಲಿಂ ಅವರು ಭಟ್ಕಳ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಲವರು ಠಾಣೆಯ ಮುಂದೆ ಜಮಾಯಿಸಿದ್ದರು. ಪೊಲೀಸರು ಅವರನ್ನು ಸಮಾಧಾನಪಡಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ವಿಷಯ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಠಾಣೆಯ ಮುಂದೆ ಸೇರಿದ್ದವರು ಅಲ್ಲಿಂದ ತೆರಳಿದರು.
ಘಟನೆಯ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಭ್ಯವಿರುವ ದೃಶ್ಯಾವಳಿ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕಲ್ಲುತೂರಾಟ ನಡೆಸಿದವರು ಯಾರು ಮತ್ತು ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ಇನ್ನಷ್ಟೇ ಖಚಿತವಾಗಬೇಕಿದೆ.